ಜಮ್ಮು-ಕಾಶ್ಮೀರ| ವಾರಂಟ್ ಇಲ್ಲದೆ ಹಿರಿಯ ನ್ಯಾಯವಾದಿ ಬಂಧನ,ಪಿಎಸ್‌ಎ ಅಡಿ ಪ್ರಕರಣ ದಾಖಲು: ವರದಿ

Update: 2024-07-11 13:16 GMT

Photo: X/@umairronga

ಹೊಸದಿಲ್ಲಿ: ಹಿರಿಯ ನ್ಯಾಯವಾದಿ ಹಾಗೂ ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ(ಎಚ್‌ಸಿಬಿಎ)ದ ಮಾಜಿ ಅಧ್ಯಕ್ಷ ನಝೀರ್ ಅಹ್ಮದ್ ರೋಂಗಾ ಅವರನ್ನು ಗುರುವಾರ ಬೆಳಿಗ್ಗೆ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಅಡಿ ಬಂಧಿಸಲಾಗಿದ್ದು, ಅವರನ್ನು ಕಾಶ್ಮೀರ ಕಣಿವೆಯ ಹೊರಗಿನ ಜೈಲಿನಲ್ಲಿ ಇರಿಸಲಾಗುತ್ತಿದೆ. ಅವರ ಕುಟುಂಬ ವರ್ಗವು ಈ ಮಾಹಿತಿಯನ್ನು ನೀಡಿದೆ ಎಂದು The Wire ವರದಿ ಮಾಡಿದೆ.

370ನೇ ವಿಧಿಯ ರದ್ದತಿಯ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಮತ್ತು ತನ್ನ ರಾಜಕೀಯ ಸಂಬಂಧಗಳಿಂದಾಗಿ ಈ ಹಿಂದೆ ಜಮ್ಮು-ಕಾಶ್ಮೀರ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ರೋಂಗಾರನ್ನು ಜಮ್ಮು-ಕಾಶ್ಮೀರ ಪೋಲಿಸರ ತಂಡವು ಯಾವುದೇ ಬಂಧನ ವಾರಂಟ್ ಇಲ್ಲದೆ ಗುರುವಾರ ನಸುಕಿನ 1:30ರ ಸುಮಾರಿಗೆ ಶ್ರೀನಗರದ ಮನೆಯಿಂದ ವಶಕ್ಕೆ ತೆಗೆದುಕೊಂಡಿದೆ ಎಂದು ಅವರ ಪುತ್ರ ಉಮೈರ್ ರೋಂಗಾ ತಿಳಿಸಿದರು.

‘ಇದು ಮೇಲಿನಿಂದ ಬಂದ ಆದೇಶ’ ಎಂದು ಪೋಲಿಸ್ ಅಧಿಕಾರಿಗಳು ಹೇಳಿದರು ಎಂದು ತಿಳಿಸಿದ ಸ್ವತಃ ವಕೀಲರೂ ಆಗಿರುವ ಉಮೈರ್, ರೋಂಗಾರನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ ಮತ್ತು ಅವರನ್ನು ಜಮ್ಮುವಿನ ಕೋಟ್ ಭಲ್ವಾಲ್ ಜೈಲಿನಲ್ಲಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

‘ನಾವು ಆಘಾತ ಮತ್ತು ತೀವ್ರ ಸಂಕಟದ ಸ್ಥಿತಿಯಲ್ಲಿದ್ದೇವೆ. ಇತ್ತೀಚಿಗೆ ಅವರ ಆರೋಗ್ಯವೂ ಸರಿಯಿಲ್ಲ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿರುವ ಉಮೈರ್, ಪೋಲಿಸರ ತಂಡ ತನ್ನ ಮನೆಗೆ ಆಗಮಿಸುತ್ತಿರುವ ಮತ್ತು ರೋಂಗಾರನ್ನು ಕರೆದೊಯ್ಯುತ್ತಿರುವ ಎರಡು ಸಿಸಿಟಿವಿ ದೃಶ್ಯಗಳ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.

ಇನ್ನೋರ್ವ ಹಿರಿಯ ವಕೀಲ ಹಾಗೂ ಎಚ್‌ಸಿಬಿಎ ಕೊನೆಯ ಚುನಾಯಿತ ಅಧ್ಯಕ್ಷ ಮಿಯಾಂ ಕಯೂಮ್ ಬಂಧನದ ನಂತರ ರೋಂಗಾರನ್ನು ಬಂಧಿಸಲಾಗಿದೆ. ಕಯೂಮ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ‘ಪ್ರಮುಖ ಶಂಕಿತ’ ಎಂದು ಆರೋಪಿಸಲಾಗಿದ್ದು, ವಕೀಲ ಬಾಬರ್ ಕಾದ್ರಿ ಕೊಲೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಅವರನ್ನು ಬಂಧಿಸಲಾಗಿತ್ತು.

ಕಾದ್ರಿಯವರನ್ನು 2020, ಸೆ.24ರಂದು ಅವರ ಶ್ರೀನಗರ ನಿವಾಸಕ್ಕೆ ಕಕ್ಷಿದಾರರ ಸೋಗಿನಲ್ಲಿ ಬಂದಿದ್ದ ಅಪರಿಚಿತ ಬಂದೂಕುಧಾರಿಗಳು ಹತ್ಯೆಗೈದಿದ್ದರು.

ಜಮ್ಮು-ಕಾಶ್ಮೀರ ಆಡಳಿತವು ಜು.1ರಂದು ನಡೆಯಬೇಕಿದ್ದ ಎಚ್‌ಸಿಬಿಎ ಚುನಾವಣೆಯನ್ನು ‘ಶಾಂತಿಭಂಗ’ದ ಅನಿರ್ದಿಷ್ಟ ಭೀತಿಯನ್ನು ಉಲ್ಲೇಖಿಸಿ ನಿಷೇಧಿಸಿದ ದಿನಗಳ ಬಳಿಕ ರೋಂಗಾ ಅವರ ಬಂಧನ ನಡೆದಿದೆ. ನಿಷೇಧ ಮತ್ತು ಎಚ್‌ಸಿಬಿಎ ಪದಾಧಿಕಾರಿಗಳ ಮೇಲೆ ನಡೆಯುತ್ತಿರುವ ದಾಳಿಗಳು ‘ಕಾಶ್ಮೀರ ಸಮಸ್ಯೆಯ ಶಾಂತಿಯುತ ಇತ್ಯರ್ಥ’ವನ್ನು ಪ್ರತಿಪಾದಿಸುತ್ತಿರುವ ವಕೀಲರ ಸಂಘದ ಮೇಲಿನ ದಬ್ಬಾಳಿಕೆಯ ಭಾಗವಾಗಿದೆ ಎಂದು ಅನೇಕ ವಕೀಲರು ಭಾವಿಸಿದ್ದಾರೆ.

2019,ಆ.5ರಂದು ಕೇಂದ್ರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮುನ್ನಾ ದಿನ ರೋಂಗಾರನ್ನು ಪಿಎಸ್‌ಎ ಅಡಿ ಬಂಧಿಸಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ನಿಷೇಧ ಮತ್ತು ನಿಷೇಧಾಜ್ಞೆಗಳ ಹೇರಿಕೆಗಾಗಿ ಸರ್ವೋಚ್ಚ ನ್ಯಾಯಾಲಯವು ಜಮ್ಮು-ಕಾಶ್ಮೀರ ಆಡಳಿತವನ್ನು ತೀವ್ರ ತರಾಟೆಗೆತ್ತಿಕೊಂಡ ಬಳಿಕ 2020,ಜ.10ರಂದು ರೋಂಗಾ ಮತ್ತು ಇತರ 25 ಜನರ ವಿರುದ್ಧ ಹೇರಲಾಗಿದ್ದ ಪಿಎಸ್‌ಎ ಅನ್ನು ಹಿಂದೆಗೆದುಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News