ನಾನು ಬಾಲ್ಯದಲ್ಲೇ ಆರ್‌ಎಸ್‌ಎಸ್‌ಗೆ ಸೇರಿದ್ದೆ, ಈಗಲೂ ಅಲ್ಲಿಗೆ ಮರಳಲು ಸಿದ್ಧ: ನ್ಯಾ. ಚಿತ್ತರಂಜನ್ ದಾಶ್
ಕೋಲ್ಕತ್ತಾ : “ಬಾಲ್ಯದಿಂದಲೇ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯನಾಗಿದ್ದೆ. ಆ ಸಂಘಟನೆಗೆ ತುಂಬಾ ಆಭಾರಿಯಾಗಿದ್ದೇನೆ. 37 ವರ್ಷಗಳ ಹಿಂದೆ ಅವರಿಂದ ದೂರಾಗಿದ್ದು, ಈಗಲೂ ಸಮರ್ಥನೆಂದು ಅವರು ಭಾವಿಸಿದರೆ, ನಾನು ಮತ್ತೆ ಆ ಸಂಘಟನೆಯನ್ನು ಸೇರ್ಪಡೆಯಾಗಲು ಸಿದ್ಧ” ಎಂದು ನ್ಯಾ. ಚಿತ್ತರಂಜನ್ ದಾಶ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಸೋಮವಾರ ಕಲ್ಕತ್ತಾ ಹೈಕೋರ್ಟ್‌ನಿಂದ ಬೀಳ್ಕೊಡುಗೆ ಪಡೆದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಈ ಹೇಳಿಕೆ ನೀಡಿದ್ದಾರೆ. "ನಾನು 37 ವರ್ಷಗಳ ಹಿಂದೆ ಅವರಿಂದ ದೂರವಾಗಿದ್ದರೂ, ಆ ಸಂಘಟನೆಯ ಸದಸ್ಯತ್ವವನ್ನು ನಾನೆಂದಿಗೂ ನನ್ನ ಸ್ವಂತ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಉಪಚರಿಸಿದ್ದೇನೆ. ಸಹಾನುಭೂತಿಯಲ್ಲಿ ನಂಬಿಕೆ ಹೊಂದಿದ್ದೇನೆ. ಅವರೇನಾದರೂ ಯಾವುದಾದರೂ ಕೆಲಸಕ್ಕೆ ನನ್ನ ಅಗತ್ಯವಿದೆಯೆಂದು ಭಾವಿಸಿದರೆ, ನಾನು ಮತ್ತೆ ಆರ್‌ಎಸ್‌ಎಸ್‌ಗೆ ಮರಳಲು ಸಿದ್ಧ. ನಾನು ಯಾವುದೇ ತಪ್ಪು ಮಾಡದೆ ಇರುವುದರಿಂದ ನಾನು ಅರ್‌ಎಸ್‌ಎಸ್‌ಗೆ ಸೇರಿದ್ದೇನೆ ಎಂದು ಹೇಳಬಲ್ಲೆ. ಯಾಕೆಂದರೆ, ಅದೂ ಕೂಡಾ ತಪ್ಪು ಅಲ್ಲ" ಎಂದು ಅವರು ಪ್ರತಿಪಾದಿಸಿದರು.
1985ರಲ್ಲಿ ಕಟಕ್‌ನ ಮಧುಸೂದನ್ ಕಾನೂನು ಕಾಲೇಜಿನಿಂದ ಕಾನೂನು ಪದವೀಧರರಾಗಿದ್ದ ನ್ಯಾ. ದಾಶ್, ಬಾಹ್ಯ ವಿದ್ಯಾರ್ಥಿಯಾಗಿ ಉತ್ಕಲ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಗಳಿಸಿದ್ದರು.
1999ರಲ್ಲಿ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕವಾಗಿದ್ದ ನ್ಯಾ. ದಾಶ್, ಹಂತಹಂತವಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ವಿಶೇಷ ನ್ಯಾಯಾಧೀಶ (ವಿಚಕ್ಷಣ), ಒರಿಸ್ಸಾ ಮಾರಾಟ ತೆರಿಗೆ ನ್ಯಾಯಾಧಿಕರಣದ ನ್ಯಾಯಾಧೀಶ, ಒಡಿಶಾ ಹೈಕೋರ್ಟ್‌ನ ರಿಜಿಸ್ಟ್ರಾರ್ (ಆಡಳಿತ) ಹುದ್ದೆಯವರೆಗೂ ಮೇಲೇರಿದ್ದರು.
ಅಕ್ಟೋಬರ್ 7, 2009ರಂದು ಒಡಿಶಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಹುದ್ದೆಗೆ ಬಡ್ತಿ ಪಡೆದಿದ್ದ ನ್ಯಾ. ದಾಶ್, ಜೂನ್ 20, 2022ರಂದು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕವಾಗಿದ್ದರು.
ಹದಿಹರೆಯದ ಬಾಲಕಿಯರ ಲೈಂಗಿತೆಯ ಕುರಿತ ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಪೀಠವೊಂದರಲ್ಲಿ ನ್ಯಾ. ದಾಶ್ ಕೂಡಾ ಭಾಗವಾಗಿದ್ದರು. ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಕುರಿತು ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಸೌಜನ್ಯ : livelaw.in