5 ವರ್ಷ ಹಳೆಯ ಯುಎಪಿಎ ಪ್ರಕರಣದಲ್ಲಿ ಕಾಶ್ಮೀರಿ ಪತ್ರಕರ್ತ ಆಸಿಫ್‌ ಸುಲ್ತಾನ್‌ಗೆ ಜಾಮೀನು

Update: 2024-05-15 07:52 GMT

ಆಸಿಫ್‌ ಸುಲ್ತಾನ್‌ (Photo: Kashmir Narrator)

ಶ್ರೀನಗರ: ಐದು ವರ್ಷಗಳ ಹಿಂದೆ ಯುಎಪಿಎ ಕಾಯಿದೆಯಡಿ ಬಂಧಿತರಾಗಿದ್ದ ಕಾಶ್ಮೀರಿ ಪತ್ರಕರ್ತ ಆಸಿಫ್‌ ಸುಲ್ತಾನ್‌ ಅವರಿಗೆ ಶ್ರೀನಗರದಲ್ಲಿರುವ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಶ್ರೀನಗರದ ಕೇಂದ್ರ ಕಾರಾಗೃಹದಲ್ಲಿ 2019ರಲ್ಲಿ ನಡೆದ ಹಿಂಸಾಚಾರ ಕುರಿತ ಪ್ರಕರಣ ಇದಾಗಿತ್ತು. ಆ ಸಂದರ್ಭ ಕೈದಿಗಳ ಒಂದು ಗುಂಪು ಕೆಲ ಬ್ಯಾರಕ್‌ಗಳಿಗೆ ಬೆಂಕಿ ಹಚ್ಚಿದ್ದೇ ಅಲ್ಲದೆ ಜೈಲು ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು.

ಈ ಪ್ರಕರಣದಲ್ಲಿ ಸುಲ್ತಾನ್‌ ಅವರನ್ನು ಫೆಬ್ರವರಿ 29ರಂದು ಬಂಧಿಸಲಾಗಿತ್ತು. ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಐದು ವರ್ಷದ ತನಕ ಬಂಧನದಲ್ಲಿದ್ದ ಅವರನ್ನು ಬಿಡುಗಡೆಗೊಳಿಸಿದ ಎರಡೇ ದಿನಗಳಲ್ಲಿ ಯುಎಪಿಎ ಅಡಿ ಅವರನ್ನು ಬಂಧಿಸಲಾಗಿತ್ತು.

ಸುಲ್ತಾನ್‌ ಅವರು ಕಸ್ಟಡಿಯಲ್ಲಿರುವಾಗ ಪೊಲೀಸರಿಗೆ ಅವರನ್ನು ಪ್ರಶ್ನಿಸಲು 72 ದಿನಗಳ ಕಾಲಾವಕಾಶ ದೊರಕಿತ್ತು ಎಂದು ಎನ್‌ಐಎ ಪ್ರಕರಣಗಳ ತನಿಖೆಗಿರುವ ವಿಶೇಷ ನ್ಯಾಯಾಲಯ ತನ್ನ ಮೇ 10ರ ಆದೇಶದಲ್ಲಿ ಹೇಳಿತ್ತು.

ಸುಲ್ತಾನ್‌ ಅವರು ಜಮ್ಮು ಕಾಶ್ಮೀರದ ಖಾಯಂ ನಿವಾಸಿಯಾಗಿರುವುದರಿಂದ ಅವರು ಅಲ್ಲಿಂದ ಪಲಾಯನಗೈಯ್ಯುವ ಸಾಧ್ಯತೆ ಕಡಿಮೆ ಎಂದು ಹೇಳಿದ ನ್ಯಾಯಾಧೀಶರು ರೂ 1 ಲಕ್ಷ ಬೇಲ್‌ ಬಾಂಡ್‌ ನೀಡಿ ಅವರು ಜಾಮೀನು ಪಡೆಯಬಹುದೆಂದು ಹೇಳಿತು.

ಅಗತ್ಯವಿರುವಾಗಲೆಲ್ಲಾ ಸುಲ್ತಾನ್‌ ಅವರು ತನಿಖಾಧಿಕಾರಿಯೆದುರು ಹಾಜರಾಗಬೇಕು ಹಾಗೂ ತಮ್ಮ ಮೊಬೈಲ್‌ ಸಂಖ್ಯೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News