ಈಡಿ, ಸಿಬಿಐ ಬಳಸಿ 10 ಚುನಾಯಿತ ರಾಜ್ಯ ಸರಕಾರಗಳನ್ನು ‘ಕದ್ದ’ ಬಿಜೆಪಿ : ಕೇಜ್ರಿವಾಲ್ ಆರೋಪ

Update: 2024-09-28 15:19 GMT

ಅರವಿಂದ ಕೇಜ್ರಿವಾಲ್ | PTI

ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಈಡಿ) ಮತ್ತು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 10 ಚುನಾಯಿತ ರಾಜ್ಯ ಸರಕಾರಗಳನ್ನು ‘ಕದ್ದಿದೆ’ ಎಂದು ಆಪ್ ವರಿಷ್ಠ ಹಾಗೂ ಮಾಜಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಶುಕ್ರವಾರ ದಿಲ್ಲಿ ವಿಧಾನಸಭೆಯಲ್ಲಿ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು ಸಂಕ್ಷಿಪ್ತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್ ಬಿಜೆಪಿ ವಿರುದ್ಧ ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 2016ರಿಂದ ಮಾರ್ಚ್ 2024ರವರೆಗೆ 13 ರಾಜ್ಯಸರಕಾರಗಳನ್ನು ಉರುಳಿಸಲು 15 ಸಲ ಪ್ರಯತ್ನಿಸಿದ್ದರು. ಈ ಪೈಕಿ 10 ಸರಕಾರಗಳನ್ನು ಉರುಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಸರಕಾರಗಳನ್ನು ಉರುಳಿಸಿದ್ದಲ್ಲ, ಬದಲಿಗೆ ಬಿಜೆಪಿಯವರು ಅವುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದರು.

ಅಜಿತ್ ಪವಾರ್,ಪ್ರತಾಪ್ ಸರ್‌ ನಾಯಕ್ ಮತ್ತು ಹಸನ್ ಮುಶ್ರಿಫ್‌ರಂತಹ ಮಹಾರಾಷ್ಟ್ರದ ರಾಜಕಾರಣಿಗಳು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದರು,ಆದರೆ ಅವರೆಲ್ಲ ಬಿಜೆಪಿಗೆ ಸೇರಿದಾಗ ಅಥವಾ ತಮ್ಮ ಮಾತೃಪಕ್ಷದಿಂದ ಬೇರ್ಪಟ್ಟು ಅದರ ಸರಕಾರವನ್ನು ಬೆಂಬಲಿಸಿದಾಗ ಈ ಪ್ರಕರಣಗಳನ್ನು ಕೈಬಿಡಲಾಯಿತು ಎಂದೂ ಕೇಜ್ರಿವಾಲ್ ಆರೋಪಿಸಿದರು.

ಆರೆಸ್ಸೆಸ್ ಜೊತೆ ಸಂಬಂಧಕ್ಕಾಗಿಯೂ ಬಿಜೆಪಿ ವಿರುದ್ಧ ದಾಳಿ ನಡೆಸಿದ ಅವರು,‘ಸಂಘ ಪ್ರಚಾರಕರು ಆರೆಸ್ಸೆಸ್ ಸಿದ್ಧಾಂತಕ್ಕಾಗಿ ತಮ್ಮ ಇಡೀ ಜೀವನವನ್ನು ಮೀಸಲಿಡುತ್ತಾರೆ. ಪ್ರತಿಯಾಗಿ ಅವರು ಏನು ಪಡೆಯುತ್ತಿದ್ದಾರೆ? ಆರೆಸ್ಸೆಸ್ಸಿಗರ ಬಗ್ಗೆ ನನಗೆ ಕರುಣೆಯಿದೆ. ಅವರು ಸಂಘಕ್ಕಾಗಿ ತಮ್ಮ ಇಡೀ ಬದುಕನ್ನು ಅರ್ಪಿಸಿದ್ದಾರೆ,ಆದರೆ ಅವರಿಗೆ ಟಿಕೆಟ್‌ಗಳು ದೊರೆಯುತ್ತಿಲ್ಲ. ಈಗ ಆರೆಸ್ಸೆಸ್ ಜನರು ಕೆಲವೊಮ್ಮೆ ಬಿಜೆಪಿಗೆ ಮತ್ತು ಕೆಲವೊಮ್ಮೆ ಎನ್‌ಸಿಪಿ ಮತ್ತು ಶಿವಸೇನೆಯ ನಾಯಕರಿಗೆ ಚಾಪೆ ಹಾಸುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ’ಎಂದು ಕುಟುಕಿದರು.

ನಾಲ್ಕೈದು ದಿನಗಳ ಹಿಂದೆ ತಾನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಈ ಹಿಂದೆ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿಯಿಂದ ಭ್ರಷ್ಟರು ಎಂದು ಕರೆಯಲ್ಪಟ್ಟಿದ್ದ ನಾಯಕರನ್ನು ಈಗ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದ್ದೆ ಎಂದ ಕೇಜ್ರಿವಾಲ್,ಇದನ್ನು ಆರೆಸ್ಸೆಸ್ ಮುಖ್ಯಸ್ಥರು ಒಪ್ಪುತ್ತಾರೆಯೇ? ಬಿಜೆಪಿಗೆ ಕೊಂಚವಾದರೂ ನಾಚಿಕೆ ಎನ್ನುವುದು ಇದೆಯೇ ಎಂದು ಪ್ರಶ್ನಿಸಿದರು.

ಮೋದಿ ವಿರುದ್ಧ ದಾಳಿಯನ್ನು ಮುಂದುವರಿಸಿದ ಕೇಜ್ರಿವಾಲ್, ಪ್ರಧಾನಿಯವರು ಅಜಿತ್ ಪವಾರ್, ಹೇಮಂತ್ ಬಿಸ್ವ ಶರ್ಮಾ, ಪ್ರಫುಲ್ ಪಟೇಲ್, ಪ್ರತಾಪ್ ಸರ್ ನಾಯಕ್, ಹಸನ್ ಮುಶ್ರಿಫ್, ಸುವೇಂದು ಅಧಿಕಾರಿ ಮತ್ತು ನವೀನ್ ಜಿಂದಾಲ್ ಸೇರಿದಂತೆ 25 ‘ಅಮೂಲ್ಯ ರತ್ನ’ಗಳನ್ನು ಇತರ ಪಕ್ಷಗಳಿಂದ ಸಂಗ್ರಹಿಸಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News