ಲೋಕಸಭಾ ಚುನಾವಣೆ| ಸಂಸತ್ತಿಗೆ ಆಯ್ಕೆಯಾದ 105 ಸಂಸದರ ವಿದ್ಯಾರ್ಹತೆ 5 ರಿಂದ 12ನೇ ತರಗತಿ
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಾಗಿ ಹೊರ ಹೊಮ್ಮಿರುವ 105 ನೂತನ ಸಂಸದರ ವಿದ್ಯಾರ್ಹತೆ ಐದನೆಯ ತರಗತಿಯಿಂದ 12ನೇ ತರಗತಿಯಾಗಿದ್ದು, 420 ಅಭ್ಯರ್ಥಿಗಳ ವಿದ್ಯಾರ್ಹತೆ ಪದವಿ ಅಥವಾ ಅದಕ್ಕೂ ಮೇಲ್ಪಟ್ಟಿದೆ ಎಂದು ಚುನಾವಣಾ ನಿಗಾ ಸಂಸ್ಥೆ ಎಡಿಆರ್ ಬಹಿರಂಗಪಡಿಸಿದೆ. ವಿಜೇತ ಅಭ್ಯರ್ಥಿಗಳ ಪೈಕಿ 17 ಮಂದಿ ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರರಾಗಿದ್ದರೆ, ಓರ್ವ ಅಭ್ಯರ್ಥಿ ಕೇವಲ ಅಕ್ಷರಸ್ಥ ಮಾತ್ರ ಆಗಿರುವ ಸಂಗತಿಯೂ ಬೆಳಕಿಗೆ ಬಂದಿದೆ.
ತಮ್ಮನ್ನು ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡಿರುವ ಎಲ್ಲ 121 ಮಂದಿಯೂ ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ವಿಜೇತ ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ತಾವು ಐದನೆಯ ತರಗತಿವರೆಗೆ ಓದಿದ್ದೇವೆ ಎಂದು ಘೋಷಿಸಿಕೊಂಡಿದ್ದರೆ, ನಾಲ್ವರು ವಿಜೇತ ಅಭ್ಯರ್ಥಿಗಳು ಎಂಟನೆಯ ತರಗತಿವರೆಗೆ ವ್ಯಾಸಂಗ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.
34 ವಿಜೇತ ಅಭ್ಯರ್ಥಿಗಳು ತಾವು 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡಿದ್ದರೆ, 65 ವಿಜೇತ ಅಭ್ಯರ್ಥಿಗಳು ತಾವು 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಮತ್ತೊಂದು ಚಿಂತಕರ ಚಾವಡಿಯಾದ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ವಿಶ್ಲೇಷಣೆಯ ಪ್ರಕಾರ, ಗೆಲುವು ಸಾಧಿಸಿರುವ ಎಲ್ಲ ಅಭ್ಯರ್ಥಿಗಳ ಸಾಮಾನ್ಯ ವೃತ್ತಿ ಕೃಷಿ ಹಾಗೂ ಸಮಾಜ ಸೇವೆ ಆಗಿರುವುದು ಕಂಡು ಬಂದಿದೆ.