ಮಮತಾ ಬ್ಯಾನರ್ಜಿ ಸರ್ವಧರ್ಮ ರ‍್ಯಾಲಿ ಮುಂದೂಡಿಕೆ ಆಗ್ರಹಿಸಿದ ಅರ್ಜಿ ತಿರಸ್ಕೃತ
ಕೋಲ್ಕತಾ: ಜನವರಿ 22ರಂದು ಆಯೋಜಿಸಲಾಗಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ವಧರ್ಮ ರ‍್ಯಾಲಿಯನ್ನು ಮುಂದೂಡುವಂತೆ ಕೋರಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ಕೋಲ್ಕತ್ತಾ ಉಚ್ಛ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಕೋಲ್ಕತ್ತಾದ ಕಾಲಿಘಾಟ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹಾಗೂ ಅನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭ ನಡೆಯಲಿರುವ ಜನವರಿ 22ರಂದು ಸರ್ವಧರ್ಮ ರ‍್ಯಾಲಿ ನಡೆಸಲಾಗುವುದು ಎಂದು ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದರು.
ರ‍್ಯಾಲಿ ಹಝ್ರಾದಿಂದ ಪಾರ್ಕ್ ಸರ್ಕಸ್ ಮೈದಾನದ ವರೆಗೆ ಮಸೀದಿ, ದೇವಾಲಯ, ಚರ್ಚ್ ಹಾಗೂ ಗುರುದ್ವಾರಗಳನ್ನು ಒಳಗೊಳ್ಳಲಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಬುಧವಾರ ಉಚ್ಛ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಬ್ಯಾನರ್ಜಿ ಅವರ ರ್ಯಾಲಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಿದೆ. ಆದುದರಿಂದ ರ್ಯಾಲಿಯನ್ನು ಮುಂದೂಡಬೇಕು ಎಂದು ಪ್ರತಿಪಾದಿಸಿದ್ದರು.