ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಹತ್ಯೆಗೆ ಕುವೈತ್‌ನಿಂದ ಬಂದ ತಂದೆ!

Update: 2024-12-13 08:03 IST
ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಹತ್ಯೆಗೆ ಕುವೈತ್‌ನಿಂದ ಬಂದ ತಂದೆ!
  • whatsapp icon

ತಿರುಪತಿ: ಅಪ್ರಾಪ್ತ ವಯಸ್ಸಿನ ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾದ ವ್ಯಕ್ತಿಯನ್ನು, ಕುವೈಟ್ನಿಂದ ವಿಮಾನದಲ್ಲಿ ಬಂದು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹತ್ಯೆಯ ತಪ್ಪೊಪ್ಪಿಗೆ ಕುರಿತ ಸೆಲ್ಫಿ ವಿಡಿಯೊವನ್ನು ತಂದೆ ಕುವೈಟ್ನಿಂದ ಬಿಡುಗಡೆ ಮಾಡಿದ್ದಾನೆ.

ಕುವೈಟ್ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಹಂತಕ, ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ಓಬುಲವಾರಿಪಳ್ಳಿ ಎಂಬ ತನ್ನ ಹುಟ್ಟೂರಿಗೆ ಆಗಮಿಸಿ, ಡಿಸೆಂಬರ್ 7ರಂದು, ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಮತ್ತೆ ಕುವೈಟ್ಗೆ ವಾಪಸ್ಸಾಗಿದ್ದಾನೆ.

ತಾನು ಹಾಗೂ ಪತ್ನಿ ಇಬ್ಬರೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ವಿಡಿಯೊದಲ್ಲಿ ಈ ವ್ಯಕ್ತಿ ಹೇಳಿಕೊಂಡಿದ್ದಾನೆ. ಅತ್ತಿಗೆಯ ಮನೆಯಲ್ಲಿ 12 ವರ್ಷದ ಪುತ್ರಿಯನ್ನು ಬಿಟ್ಟು, ಇಬ್ಬರೂ ಕುವೈತ್‌ಗೆ ತೆರಳಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಇತ್ತೀಚೆಗೆ ಅತ್ತಿಗೆಯ ಮಾವ, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ವಿವರಿಸಿದ್ದಾನೆ.

"ಪುತ್ರಿ ಇದಕ್ಕೆ ಪ್ರತಿರೋಧ ತೋರಿದಾಗ, ಬಾಯಿ ಮುಚ್ಚಿದ್ದಾರೆ. ಆದರೂ ಕೂಗಿಕೊಂಡಾಗ ಪತ್ನಿಯ ಸಹೋದರಿ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾಳೆ" ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಕುಟುಂಬದವರು ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಬಾಲಕಿಗೆ ಬೆದರಿಕೆ ಹಾಕಿದ್ದು, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು. ಇತ್ತೀಚೆಗೆ ತಾಯಿ ಭೇಟಿ ನೀಡಿದಾಗ ಬಾಲಕಿ ಎಲ್ಲ ವಿಷಯವನ್ನು ತಾಯಿಯೊಂದಿಗೆ ಹೇಳಿಕೊಂಡಳು ಎನ್ನಲಾಗಿದೆ.

"ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಪತ್ನಿ ಠಾಣೆಗೆ ತೆರಳಿದಾಗ ಕೃತ್ಯ ಎಸಗಿದ ವ್ಯಕ್ತಿ ಹಾಗೂ ಪತ್ನಿಯ ಸಹೋದರಿಯನ್ನು ಠಾಣೆಗೆ ಕರೆಸಿ ಛೀಮಾರಿ ಹಾಕಲಾಗಿತ್ತು. ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಪತ್ನಿ ಠಾಣೆಗೆ ಹೋದಾಗ ನೆರವು ನೀಡುವ ಬದಲು ನನ್ನ ಪತ್ನಿಯ ವಿರುದ್ಧವೇ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದರು. ಆದ್ದರಿಂದ ನಾನೇ ಕಾನೂನು ಕೈಗೆತ್ತಿಕೊಳ್ಳಬೇಕಾಯಿತು" ಎಂದು ವಿಡಿಯೊದಲ್ಲಿ ಸ್ಪಷ್ಟಪಡಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News