ಟ್ವಿಟರ್ ನಲ್ಲಿ ಕುಕಿ ಬಳಕೆದಾರರೊಂದಿಗೆ ವಾಗ್ಯುದ್ಧದ ಬಳಿಕ ಸಂದೇಶಗಳನ್ನು ಡಿಲೀಟ್ ಮಾಡಿದ ಮಣಿಪುರ ಸಿಎಂ

Update: 2023-07-01 15:39 GMT

 N Biren Singh. | PTI

ಹೊಸದಿಲ್ಲಿ: ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು ಶನಿವಾರ ಟ್ವಿಟರ್ ನಲ್ಲಿ ಕುಕಿ ಬಳಕೆದಾರರದೊಂದಿಗೆ ವಾಗ್ಯುದ್ಧಕ್ಕೆ ಇಳಿದಿದ್ದು ಮ್ಯಾನ್ಮಾರ್ ನಲ್ಲಿಯ ಸಮುದಾಯಗಳೊಂದಿಗೆ ಕುಕಿಗಳ ಸಂಬಂಧಗಳನ್ನು ಪ್ರಮುಖವಾಗಿ ಪ್ರಸ್ತಾವಿಸಿದ್ದರು. ಬೆಳಗಿನ ಜಾವ ಪೋಸ್ಟ್ ಮಾಡಿದ್ದ ಈ ಟ್ವೀಟ್ ಗಳನ್ನು ಕೆಲವು ಗಂಟೆಗಳ ಬಳಿಕ ಅಳಿಸಲಾಗಿದೆ. ಶುಕ್ರವಾರವಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿಂಗ್ ರಾಜೀನಾಮೆ ಕುರಿತಂತೆ ನಾಟಕೀಯ ವಿದ್ಯಮಾನಗಳಿಗೆ ಮಣಿಪುರವು ಸಾಕ್ಷಿಯಾಗಿತ್ತು.

ಮಣಿಪುರ ಕಳೆದ ಎರಡು ತಿಂಗಳುಗಳಿಂದಲೂ ಹಿಂಸಾಚಾರಗಳಿಂದ ತತ್ತರಿಸಿದ್ದು, ಈವರೆಗೆ ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಲು ಸಿಂಗ್ ತನ್ನ ನಿವಾಸ ದಿಂದ ಹೊರಬಿದ್ದಾಗ ಬೆಂಬಲಿಗರು ಅವರ ಕಾರನ್ನು ತಡೆದು ರಾಜೀನಾಮೆ ನೀಡದಂತೆ ಆಗ್ರಹಿಸಿದ್ದರು. ಬಳಿಕ ಸಿಂಗ್ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ತನ್ನ ನಿರ್ಧಾರವನ್ನು ಪ್ರಕಟಿಸಿದ್ದರು.

ತನ್ನ ನಿರ್ಧಾರವನ್ನು ಟೀಕಿಸಿದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಶನಿವಾರ ಬೆಳಿಗ್ಗೆ ಸಿಂಗ್ ಪ್ರತಿಕ್ರಿಯಿಸಿದ್ದರು.

ನೀವು ಬಹಳ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು ಎಂದು ಥಾಂಗ್ ಕುಕಿ ಎಂಬಾತ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿರುವ ಸಿಂಗ್,‘ನೀವು ಭಾರತದವರೇ ಅಥವಾ ಮ್ಯಾನ್ಮಾರ್ ನವರೇ’ಎಂದು ಪ್ರಶ್ನಿಸಿದ್ದಾರೆ.

ಕುಕಿ ಸಮುದಾಯವು ಮ್ಯಾನ್ಮಾರ್ ಜನರೊಂದಿಗೆ ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ ಎನ್ನುವುದನ್ನು ಸಿಂಗ್ ಅವರ ಈ ಪ್ರತಿಕ್ರಿಯೆಯು ಬೆಟ್ಟು ಮಾಡಿತ್ತು.

ಕನಿಷ್ಠ ಇನ್ನೂ ಎರಡು ಟ್ವೀಟ್ ಗಳಲ್ಲಿ ಸಿಂಗ್ ಮ್ಯಾನ್ಮಾರ್ ಅನ್ನು ಪ್ರಸ್ತಾವಿಸಿದ್ದಾರೆ. ಮ್ಯಾನ್ಮಾರ್ ನಲ್ಲಿ ಮೈತಿ ಸಮುದಾಯದವರೂ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ ಎಂಬ ಬಳಕೆದಾರನೋರ್ವನ ಪೋಸ್ಟ್ ಗೆ ಸಿಂಗ್, ಮ್ಯಾನ್ಮಾರ್ ನಲ್ಲಿಯ ಮೈತಿಗಳು ಎಂದಿಗೂ ಅಲ್ಲಿ ಪ್ರತ್ಯೇಕ ತಾಯ್ನಾಡನ್ನು ಕೇಳುವುದಿಲ್ಲ ಎಂದು ಉತ್ತರಿಸಿದ್ದಾರೆ.

ತನ್ನನ್ನು ಝಲೆಂಗಮ್ ಪ್ರಜೆ ಎಂದು ಬಣ್ಣಿಸಿಕೊಂಡಿದ್ದ ಇನ್ನೋರ್ವ ವ್ಯಕ್ತಿಗೆ ಸಿಂಗ್, ಅದು ಮ್ಯಾನ್ಮಾರ್ ನಲ್ಲಿ ಇರಬಹುದು ಎಂದು ಉತ್ತರಿಸಿದ್ದಾರೆ. ಝಲೆಂಗಮ್ ಕುಕಿ ಸಮುದಾಯ ಕೇಳುತ್ತಿರುವ ಪ್ರತ್ಯೇಕ ರಾಜ್ಯಕ್ಕೆ ಪ್ರಸ್ತಾವಿತ ಹೆಸರು ಆಗಿದೆ. ಇನ್ನೂ ಹಲವು ಕುಕಿ ಬಳಕೆದಾರರ ಟ್ವೀಟ್ ಗಳಿಗೆ ಸಿಂಗ್ ಖಾರವಾಗಿಯೇ ಉತ್ತರಿಸಿದ್ದು,ಬಳಿಕ ಅವುಗಳನ್ನು ಅಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News