ಬಿಹಾರ | ಭಾರೀ ಮಳೆ, ಪ್ರವಾಹದಲ್ಲಿ ಸಿಲುಕಿರುವ 150 ಕಾರ್ಮಿಕರು

Update: 2024-07-07 16:03 GMT

Photo : PTI

ಹೊಸದಿಲ್ಲಿ : ಬಿಹಾರದಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದ್ದು, ಬಗಾಹಾದಲ್ಲಿ ಸುಮಾರು 150 ಕಾರ್ಮಿಕರು ನೆರೆ ನೀರಿನಲ್ಲಿ ಸಿಲುಕಿದ್ದಾರೆ. ಈ ಪೈಕಿ ವಯಸ್ಸಾದವರು,ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 40 ಜನರನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್ಡಿಆರ್ಎಫ್)ಯು ಈವರೆಗೆ ರಕ್ಷಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.

ರವಿವಾರ ಬೆಳಿಗ್ಗೆ ಗದ್ದೆಗಳಲ್ಲಿ ಕೆಲಸ ಮಾಡಲು ಹಲವಾರು ಕಾರ್ಮಿಕರು ಗಂಡಕ್ ನದಿಯನ್ನು ದಾಟುತ್ತಿದ್ದಾಗ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿತ್ತು, ಪರಿಣಾಮವಾಗಿ ಕಾರ್ಮಿಕರು ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯಾಡಳಿತವು ರಕ್ಷಣಾ ಕಾರ್ಯಾಚರಣೆಗಾಗಿ SDRF ತಂಡಗಳನ್ನು ರವಾನಿಸಿದೆ. ರಾಜ್ಯ ಸರಕಾರವು ನಾಲ್ಕು ದೋಣಿಗಳನ್ನು ನಿಯೋಜಿಸಿದೆ ಎಂದು ಅಧಿಕಾರಿ ತಿಳಿಸಿದರು.

ಈ ನಡುವೆ ಸ್ಥಳೀಯ ಆಡಳಿತವು, ತಾಳ್ಮೆಯಿಂದಿರುವಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಜನರನ್ನು ಆಗ್ರಹಿಸಿದೆ.

ಕೋಸಿ, ಮಹಾನಂದಾ, ಬಾಗಮತಿ, ಗಂಡಕ್, ಕಮಲಾ ಬಾಲನ್ ಮತ್ತು ಕಮಲಾ ಸೇರಿದಂತೆ ಪ್ರಮುಖ ನದಿಗಳು ವಿವಿಧ ಸ್ಥಳಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ನೀರು ಎಚ್ಚರಿಕೆ ಮಟ್ಟವನ್ನು ತಲುಪಿದೆ ಎಂದು ಜಲ ಸಂಪನ್ಮೂಲ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News