ವಿವಾಹ ಪ್ರಸ್ತಾವನೆ ಮದುವೆಯಲ್ಲಿ ಅಂತ್ಯವಾಗಲಿಲ್ಲ ಎಂಬುದು ವಂಚನೆಯಾಗದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಿವಾಹ ಪ್ರಸ್ತಾವನೆ ಫಲಪ್ರದವಾಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
“ವಿವಾಹ ಪ್ರಸ್ತಾವನೆಯೊಂದನ್ನು ಪ್ರಾರಂಭಿಸಲು ಮತ್ತು ಅದು ನಿರೀಕ್ಷಿತ ಫಲ ನೀಡದೇ ವಿಫಲವಾಗಲು ಹಲವಾರು ಕಾರಣಗಳಿರಬಹುದು,” ಎಂದು ರಾಜು ಕೃಷ್ಣ ಶೆಡ್ಬಲ್ಕರ್ ಎಂಬಾತನ ವಿರುದ್ಧ ದಾಖಲಾದ ವಂಚನೆ ಪ್ರಕರಣವನ್ನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪ್ರಸನ್ನ ಬಿ ವರಳೆ ಅವರ ಪೀಠ ಹೇಳಿದೆ.
ಕರ್ನಾಟಕ ಹೈಕೋರ್ಟ್ ಸೆಕ್ಷನ್ 417 ಅಡಿಯಲ್ಲಿ ತನ್ನನ್ನು ದೋಷಿಯೆಂದು ಘೋಷಿಸಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ರಾಜು ಕೃಷ್ಣ 2021ರಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಈ ಸೆಕ್ಷನ್ ಅಡಿಯಲ್ಲಿ ಒಂದು ವರ್ಷದ ತನಕ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
“ವಂಚನೆ ಪ್ರಕರಣ ದಾಖಲಿಸಲು ಆರಂಭದಿಂದಲೂ ವಂಚನೆಯ ಉದ್ದೇಶವಿರಬೇಕು ಎಂದು ಈ ಕೋರ್ಟ್ ಪುನರುಚ್ಛರಿಸಿದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ದೂರಿನಲ್ಲಿ ಅದು ಕಾಣಿಸುತ್ತಿಲ್ಲ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನನ್ನು ವಿವಾಹವಾಗದೆ ರಾಜು ಕೃಷ್ಣ ವಂಚಿಸಿದ್ದಾನೆಂದು ಮಹಿಳೆಯೊಬ್ಬಳು ನೀಡಿದ್ದ ದೂರಿನ ಆಧಾರದ ಮೇಲೆ ಆತ, ಆತನ ಸಹೋದರರು, ಸಹೋದರಿ ಹಾಗೂ ತಾಯಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿತ್ತು ಹಾಗೂ ತಾನು ಮತ್ತು ರಾಜು ಪರಸ್ಪರ ಮಾತನಾಡುತ್ತಿದ್ದೆವು. ತನ್ನ ತಂದೆ ವಿವಾಹ ಮಂಟಪ ಬುಕ್ ಮಾಡಲು ರೂ. 75000 ಕೂಡ ಪಾವತಿಸಿದ್ದರು, ಆದರೆ ರಾಜು ಬೇರೆ ವಿವಾಹವಾಗಿದ್ದು ನಂತರ ತಿಳಿದು ಬಂತು ಎಂದು ಯುವತಿ ದೂರಿದ್ದಳು.
ಕರ್ನಾಟಕ ಹೈಕೋರ್ಟ್ ರಾಜು ಹೊರತುಪಡಿಸಿ ಎಲ್ಲಾ ಆರೋಪಿತರ ವಿರುದ್ಧದ ಪ್ರಕರಣ ಕೈಬಿಟ್ಟಿತ್ತು.
ಆದರೆ ಯುವತಿಯನ್ನು ವಂಚಿಸುವ ಯಾವುದೇ ಉದ್ದೇಶ ಅರ್ಜಿದಾರನಿಗಿತ್ತು ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿ ಸುಪ್ರೀಂ ಕೋರ್ಟ್ ಹೇಳಿದೆ.