ವರ್ಷದ ಒಳಗೆ ಮಧ್ಯಂತರ ಲೋಕಸಭಾ ಚುನಾವಣೆ : ಭೂಪೇಶ್ ಬಾಘೆಲ್ ಭವಿಷ್ಯ
ರಾಯ್ಪುರ : ದೇಶದಲ್ಲಿ ಒಂದು ವರ್ಷದ ಒಳಗೆ ಮಧ್ಯಂತರ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಭೂಪೇಶ್ ಬಾಘೆಲ್ ಶುಕ್ರವಾರ ಭವಿಷ್ಯ ನುಡಿದಿದ್ದಾರೆ.
‘‘ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು. ಇನ್ನು ಆರು ತಿಂಗಳು ಮತ್ತು ಒಂದು ವರ್ಷದ ನಡುವಿನ ಅವಧಿಯಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ’’ ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಬಾಘೆಲ್ ಹೇಳಿದರು.
ಅದೇ ವೇಳೆ, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಕಷ್ಟ ಎದುರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
‘‘ಆದಿತ್ಯನಾಥ್ರ ಕುರ್ಚಿ ಅಲುಗಾಡುತ್ತಿದೆ, ಭಜನ್ಲಾಲ್ ಶರ್ಮ ನಡುಗುತ್ತಿದ್ದಾರೆ ಮತ್ತು ಫಡ್ನವೀಸ್ ರಾಜೀನಾಮೆ ನೀಡುತ್ತಿದ್ದಾರೆ’’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯ ಬಗ್ಗೆಯೂ ಅವರು ವ್ಯಂಗ್ಯವಾಡಿದರು. ‘‘ಒಂಟೆಯು ಈಗ ಪರ್ವತದಿಂದ ಇಳಿದು ಕೆಳಗೆ ಬಂದಿದೆ. ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಾಯಿಸುತ್ತಿದ್ದವರು ಈಗ ಒಂದೇ ಬಟ್ಟೆಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈಗ ತಿನ್ನುವುದು, ಕುಡಿಯುವುದರ ಬಗ್ಗೆ ಅಥವಾ ತಾವು ಏನು ಧರಿಸಿದ್ದೇವೆ ಎನ್ನುವ ಬಗ್ಗೆ ಗಮನ ಹರಿಸುತ್ತಿಲ್ಲ’’ ಎಂದು ಬಾಘೆಲ್ ಹೇಳಿದರು.