ದ್ವೇಷದ ಭಾಷಣಗಳಿಂದ ಮೋದಿ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ: ಮನಮೋಹನ್‌ ಸಿಂಗ್‌

Update: 2024-05-30 09:13 GMT

ನರೇಂದ್ರ ಮೋದಿ , ಡಾ ಮನಮೋಹನ್‌ ಸಿಂಗ್‌ | PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು “ತಮ್ಮ ದ್ವೇಷದ ಭಾಷಣಗಳ ಮೂಲಕ ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ,” ಎಂದು ಮಾಜಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

“ಈ ಚುನಾವಣಾ ಪ್ರಚಾರದ ಆಗುಹೋಗುಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮೋದೀ ಜಿ ಅವರು ದ್ವೇಷದ ಭಾಷಗಳಲ್ಲಿ ತೊಡಗಿದ್ದಾರೆ ಹಾಗೂ ಇವುಗಳು ಸಮಾಜವನ್ನು ಒಡೆಯುವ ಸ್ವರೂಪದ ಭಾಷಣಗಳಾಗಿವೆ,” ಎಂದು ಪಂಜಾಬ್‌ ಮತದಾರರಿಗೆ ಮಾಡಿರುವ ಮೂರು ಪುಟಗಳ ಅಪೀಲಿನಲ್ಲಿ ಡಾ. ಸಿಂಗ್‌ ಹೇಳಿದ್ದಾರೆ.

“ಸಾರ್ವಜನಿಕ ಭಾಷಣದ ವೇಳೆ ಪ್ರಧಾನಿ ಹುದ್ದೆಗೆ ಘನತೆಗೆ ಕುಂದುಂಟು ಮಾಡಿದ ಮೊದಲ ಪ್ರಧಾನಿ ಮೋದೀ ಜಿ ಆಗಿದ್ದಾರೆ. ಈ ಹಿಂದಿನ ಯಾವುದೇ ಪ್ರಧಾನಿ ಇಂತಹ ದ್ವೇಷದಿಂದ ಕೂಡಿದ, ಅಸಂಸದೀಯ ಕಟು ಪದಗಳನ್ನು ಸಮಾಜದ ಒಂದು ನಿರ್ದಿಷ್ಟ ವಿಭಾಗ ಅಥವಾ ವಿಪಕ್ಷಗನ್ನು ಗುರಿಯಾಗಿಸಿ ಮಾಡಿಲ್ಲ. ಅವರು ಕೆಲ ಸುಳ್ಳು ಹೇಳಿಕೆಗಳನ್ನು ಉಲ್ಲೇಖಿಸಿ ನಾನು ಅವುಗಳನ್ನು ಹೇಳಿದ್ದೇನೆಂದು ಹೇಳಿಕೊಂಡರು. ನಾನು ನನ್ನ ಜೀವಮಾನದಲ್ಲಿ ಯಾವುದೇ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದಿಂದ ಪ್ರತ್ಯೇಕವಾಗಿ ನೋಡಿಲ್ಲ. ಹಾಗೆ ಮಾಡುವುದು ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯವಾಗಿದೆ,” ಎಂದು ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ಪಂಜಾಬ್‌, ಪಂಜಾಬಿಗಳು ಮತ್ತು ಪಂಜಾಬಿತನದ ವಿರುದ್ಧ ಆರೋಪಗಳನ್ನು ಹೊರಿಸುವಲ್ಲಿ ಪ್ರಧಾನಿ ಏನನ್ನೂ ಬಿಟ್ಟಿಲ್ಲ ಎಂದು ಹೇಳಿದ ಡಾ. ಸಿಂಗ್‌ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ರಾಜಧಾನಿಯ ಗಡಿ ಭಾಗಗಳಲ್ಲಿ ತಿಂಗಳುಗಟ್ಟಲೆ ನಡೆದ ಪ್ರತಿಭಟನೆಗಳ ವೇಲೆ ಹುತಾತ್ಮರಾದ 750ಕ್ಕೂ ಅಧಿಕ ರೈತರು ಪಂಜಾಬ್‌ನವರಾಗಿದ್ದಾರೆ. ಲಾಠಿಗಳು ಮತ್ತು ರಬ್ಬರ್‌ ಬುಲೆಟ್‌ಗಳು ಸಾಕಾಗದು ಎಂಬಂತೆ ಪ್ರಧಾನಿ ರೈತರನ್ನು ಆಂಧೋಲನಜೀವಿಗಳು ಮತ್ತು ಪರಜೀವಿ ಎಂದು ಸಂಸತ್ತಿನಲ್ಲಿ ಹೇಳಿಕೊಂಡರು. ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಜಾರಿಗೊಳಿಸಲಾದ ಮೂರು ಕೃಷಿ ಕಾಯಿದೆಗಳನನು ವಾಪಸ್‌ ಪಡೆಯಬೇಕೆಂಬ ಒಂದೇ ಆಗ್ರಹ ರೈತರದ್ದಾಗಿತ್ತು,” ಎಂದು ಡಾ ಸಿಂಗ್‌ ಹೇಳಿದರು.

“ಬಿಜೆಪಿ ಆಡಳಿತದ ವೇಳೆ ಭಾರತದ ಆರ್ಥಿಕತೆ ಊಹಿಸಲಾಗದಷ್ಟು ಕಷ್ಟ ಅನುಭವಿಸಿದೆ. ಅಮಾನ್ಯೀಕರಣ ವೈಫಲ್ಯ, ದೋಷಪೂರಿತ ಜಿಎಸ್‌ಟಿ ಹಾಗೂ ಕೋವಿಡ್‌ ಸಾಂಕ್ರಾಮಿದಕ ಅಸಮರ್ಪಕ ನಿರ್ವಹಣೆಯು ಸಾಕಷ್ಟು ಕಷ್ಟವುಂಟು ಮಾಡಿದೆ. ಅಭೂತಪೂರ್ವ ನಿರುದ್ಯೋಗ ಸಮಸ್ಯೆ, ಹದ್ದುಬಸ್ತಿನಲ್ಲಿರದ ಹಣದುಬ್ಬರ ಸಮಾಜದಲ್ಲಿ ಅಸಮಾನತೆಯ ಅಂತರವನ್ನು ಇನ್ನಷ್ಟು ಹೆಚ್ಚಾಗಿಸಿದೆ,” ಎಂದು ಮನಮೋಹನ್‌ ಸಿಂಗ್‌ ತಮ್ಮ ಪತ್ರದಲ್ಲಿಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News