ಹರ್ಯಾಣದ ನೂಹ್‌ನಲ್ಲಿ ವಲಸೆ ಕಾರ್ಮಿಕರ 250ಕ್ಕೂ ಅಧಿಕ ಗುಡಿಸಲುಗಳು ನೆಲಸಮ

Update: 2023-08-04 15:37 GMT

 PHOTO: Sheetal Chopra/ Twitter

ಚಂಡಿಗಡ: ಹರ್ಯಾಣ ಸರಕಾರವು ಹಿಂಸಾಚಾರ ಪೀಡಿತ ನೂಹ್ ಜಿಲ್ಲೆಯ ತೌರು ಪಟ್ಟಣದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದ ಆರೋಪದಲ್ಲಿ 250ಕ್ಕೂ ಅಧಿಕ ವಲಸೆ ಕಾರ್ಮಿಕರ ಗುಡಿಸಲುಗಳನ್ನು ಗುರುವಾರ ನೆಲಸಮಗೊಳಿಸಿದೆ.

ಸೋಮವಾರ ಹರ್ಯಾಣದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ವಲಸೆ ಕಾರ್ಮಿಕರು ಭಾಗಿಯಾಗಿದ್ದರು ಎಂದು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಮತ್ತು ಪೊಲೀಸರು ಆರೋಪಿಸಿದ್ದಾರೆ.

ಸೋಮವಾರ ನೂಹ್‌ನಲ್ಲಿ ಬಜರಂಗದಳ ಮತ್ತು ವಿಹಿಂಪ ಆಯೋಜಿಸಿದ್ದ ಬೃಜ್ ಮಂಡಲ ಜಲಾಭಿಷೇಕ ಯಾತ್ರೆಯ ಸಂದರ್ಭ ಘರ್ಷಣೆ ಉಂಟಾಗಿದ್ದು, ಬಳಿಕ ನೆರೆಯ ಜಿಲ್ಲೆಗಳಿಗೂ ಹರಡಿತ್ತು. ವಿಶೇಷವಾಗಿ ಗುರುಗ್ರಾಮವು ವ್ಯಾಪಕ ಅಗ್ನಿಸ್ಪರ್ಶ ಮತ್ತು ಗುಂಪು ದಾಳಿಗಳಿಗೆ ಸಾಕ್ಷಿಯಾಗಿತ್ತು.

ಮುಸ್ಲಿಮ್ ವಲಸಿಗರ ಮನೆಗಳನ್ನು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಅವರು ಸ್ಥಳವನ್ನು ತೊರೆಯದಿದ್ದರೆ ಹಿಂಸಾಚಾರದ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ವರದಿಯಾಗಿದೆ. ಓರ್ವ ಮೌಲ್ವಿ ಮತ್ತು ಇಬ್ಬರು ಗೃಹರಕ್ಷಕರು ಸೇರಿದಂತೆ ಆರು ಜನರು ಈವರೆಗೆ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸೋಮವಾರದಿಂದ 176 ಜನರನ್ನು ಬಂಧಿಸಲಾಗಿದ್ದು,90ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 41 ಪ್ರಕರಣಗಳು ದಾಖಲಾಗಿವೆ.

ಗುರುವಾರ ಭಾರೀ ಭದ್ರತೆಯ ನಡುವೆ ಬುಲ್ಡೋಜರ್‌ಗಳು ನೆಲಸಮ ಕಾರ್ಯಾಚರಣೆಯನ್ನು ನಡೆಸಿದವು. ನಾಲ್ಕು ವರ್ಷಗಳಿಂದಲೂ ವಲಸಿಗರು ವಾಸವಿರುವ ಮುಹಮ್ಮದ್‌ಪುರ ರಸ್ತೆಯ ಸುಮಾರು ಒಂದು ಎಕರೆ ಜಾಗದಲ್ಲಿ 250ಕ್ಕೂ ಅಧಿಕ ಗುಡಿಸಲುಗಳು ನಿರ್ಮಾಣಗೊಂಡಿದ್ದವು.

ಗುಡಿಸಲುಗಳು ಕಾನೂನುಬಾಹಿರವಾಗಿದ್ದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ. ನೀವು ಅಕ್ರಮ ನಿರ್ಮಾಣವನ್ನು ಹೊಂದಿರುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಲು ಅದನ್ನು ಬಳಸುವುದು ಸಾಧ್ಯವಿಲ್ಲ ಎಂದು ಎಡಿಜಿಪಿ ಮಮತಾ ಸಿಂಗ್ ಅವರ ವಿಶೇಷ ಕರ್ತವ್ಯಾಧಿಕಾರಿ ನರೇಂದ್ರ ಬಿರ್ಜಾನಿಯಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News