ಲಾಡ್ಲಿ ಬೆಹನಾ ಯೋಜನೆಯ ಕುರಿತ ಹೇಳಿಕೆ: ಶಿವಸೇನೆ ನಾಯಕ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲು
ಭೋಪಾಲ್: ಮಧ್ಯಪ್ರದೇಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಲಾಡ್ಲಿ ಬೆಹನಾ ಯೋಜನೆಯ ಕುರಿತು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬುಧವಾರ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿಯ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವಂದನಾ ಜಾಚಕ್ ಹಾಗೂ ಉಪಾಧ್ಯಕ್ಷೆ ಸುಷ್ಮಾ ಚೌಹಾಣ್ ನೀಡಿರುವ ದೂರನ್ನು ಆಧರಿಸಿ ಭೋಪಾಲ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅಖಿಲ್ ಪಟೇಲ್ ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಳ್ಳಲಿದ್ದೇವೆ ಎಂಬ ಭೀತಿಯಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಾಯಕರು ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಆರೋಪಿಸಿದ ಬೆನ್ನಿಗೇ ರಾವತ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಮಧ್ಯಪ್ರದೇಶದಲ್ಲಿ ಜಾರಿಗೊಳಿಸಲಾಗಿದ್ದ ಲಾಡ್ಲಿ ಬೆಹನಾ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದರು. ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವ ಇಂತಹುದೇ ಯೋಜನೆಯನ್ನು ಮಹಾರಾಷ್ಟ್ರದಲ್ಲೂ ಜಾರಿಗೊಳಿಸಲಾಗಿದೆ.