ಚತ್ತೀಸ್ ಗಡ: 2 ತಿಂಗಳುಗಳಲ್ಲಿ ನಕ್ಸಲ್ ದಾಳಿಗೆ 8 ಭದ್ರತಾ ಸಿಬ್ಬಂದಿ ಮೃತ್ಯು

Update: 2024-02-15 16:48 GMT

Credit: PTI File Photo

ರಾಯ್ಪುರ: ಚತ್ತೀಸ್ ಗಡದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ನಡೆದ ನಕ್ಸಲ್ ದಾಳಿಗಳಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರಕಾರವು ಗುರುವಾರ ವಿಧಾನಸಭೆಗೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಎನ್ಕೌಂಟರ್ ಕಾಳಗಗಳಲ್ಲಿ ಕನಿಷ್ಠ ಎಂಟು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.

2023ರ ನವೆಂಬರ್ 30ರಿಂದ ಜನವರಿ 30ರವರೆಗೆ ಎನ್ಕೌಂಟರ್ ಗಳು ಹಾಗೂ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸೇರಿದಂತೆ ಸುಮಾರು 54 ನಕ್ಸಲ್ ಸಂಬಂಧಿತ ಘಟನೆಗಳು ನಡೆದಿವೆ. ಈ ಪೈಕಿ 20 ಘಟನೆಗಳಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಓರ್ವ ರಹಸ್ಯ ಸೈನಿಕ ಸಾವನ್ನಪ್ಪಿದ್ದಾರೆ ಮತ್ತು 53 ಮಂದಿ ಗಾಯಗೊಂಡಿದ್ದಾರೆ. ಎಂದು ಛತ್ತೀಸ್ ಗಡದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ವಿಜಯ ಶರ್ಮಾ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚರಣ್ದಾಸ್ ಮಹಂತ್ ಅವರ ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಶರ್ಮಾ ಅವರು ಈ ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ನಡೆದ ನಾಲ್ಕು ಘಟನೆಗಳಲ್ಲಿ ಸುಮಾರು ಎಂಟು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆಂದು ಅವರು ತಿಳಿಸಿದ್ದಾರೆ.

ಜನವರಿ 30ರಂದು ಚತ್ತೀಸ್ ಗಡದ ಸುಕ್ಮಾ ಹಾಗೂ ಬಿಜಾಪುರ್ ಜಿಲ್ಲೆಗಳ ಗಡಿಪ್ರದೇಶದಲ್ಲಿ ನಕ್ಸಲರ ಜೊತೆ ನಡೆದ ಎನ್ಕೌಂಟರ್ ಕಾಳಗದಲ್ಲಿ ಕೋಬ್ರಾ ಘಟಕದ ಇಬ್ಬರು ಕಮಾಂಡೊಗಳು ಸೇರಿದಂತೆ ಸಿ ಆರ್ ಪಿ ಎಫ್ ನ ಮೂವರು ಯೋಧರು ಸಾವನ್ನಪ್ಪಿದ್ದರು ಮತ್ತು ಇತರ 17 ಮಂದಿ ಗಾಯಗೊಂಡಿದ್ದರು ಎಂದು ವಿಜಯ ಶರ್ಮಾ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News