ಗರ್ಭಿಣಿ ಉದ್ಯೋಗಿಗೆ ರಜೆ ಮಂಜೂರು ಮಾಡದ ಮಕ್ಕಳ ಕಲ್ಯಾಣಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಒಡಿಶಾ ಸರಕಾರ
ಭುವನೇಶ್ವರ: ಗರ್ಭಿಣಿಯೊಬ್ಬರಿಗೆ ರಜೆ ಮಂಜೂರು ಮಾಡಲು ಮಕ್ಕಳ ಕಲ್ಯಾಣಾಧಿಕಾರಿ ನಿರಾಕರಿಸಿದ್ದರಿಂದ ಆಕೆಗೆ ಗರ್ಭಪಾತವಾಯಿತು ಎಂಬ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು, ಅಧಿಕಾರಿಯನ್ನು ಬುಧವಾರ ಕರ್ತವ್ಯದಿಂದ ಬಿಡುಗಡೆಗೊಳಿಸಿ ಒಡಿಶಾ ಸರಕಾರ ಆದೇಶಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉಪ ಮುಖ್ಯಮಂತ್ರಿ ಪ್ರವತಿ ಪರೀದಾ, “ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತೆಯಾಗಿರುವ 26 ವರ್ಷದ ಬರ್ಷಾ ಪ್ರಿಯದರ್ಶಿನಿ ಎಂಬ ಎಂಬವರಿಗೆ ರಜೆ ಮಂಜೂರು ಮಾಡದ್ದರಿಂದ ಆಕೆಗೆ ಗರ್ಭಪಾತವಾಗಿದೆ ಎಂಬ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಕೇಂದ್ರಪಾರ ಜಿಲ್ಲೆಯ ದೆರಾಬಿಶ್ ಬ್ಲಾಕ್ ನ ಮಕ್ಕಳ ಕಲ್ಯಾಣ ಯೋಜನಾಧಿಕಾರಿ ಸ್ನೇಹಲತಾ ಸಾಹೂ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ, ಮಕ್ಕಳ ಕಲ್ಯಾಣ ಯೋಜನಾಧಿಕಾರಿ ಸ್ನೇಹಲತಾ ಸಾಹೂ ರಜೆ ಮಂಜೂರು ಮಾಡದೆ ಇದ್ದುದರಿಂದ ನನಗೆ ಗರ್ಭಪಾತವಾಯಿತು ಎಂದು ಬರ್ಷಾ ಪ್ರಿಯದರ್ಶಿನಿ ಎಂಬ ಒಡಿಶಾ ಸರಕಾರಿ ಉದ್ಯೋಗಿಯೊಬ್ಬರು ಆರೋಪಿಸಿದ್ದರು. ಈ ಘಟನೆಯ ಬಗ್ಗೆ ವ್ಯಾಪಕ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದ ಒಡಿಶಾ ಸರಕಾರ, ತನಿಖೆಯ ಭಾಗವಾಗಿ ಆರೋಪಕ್ಕೆ ಗುರಿಯಾಗಿರುವ ಮಕ್ಕಳ ಕಲ್ಯಾಣ ಯೋಜನಾಧಿಕಾರಿ ಸ್ನೇಹಲತಾ ಸಾಹೂ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದೆ.