ರೈತರ ಆದಾಯ ಹೆಚ್ಚಿಸಲು ಈರುಳ್ಳಿ, ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ದರ ಮಿತಿ ರದ್ದುಗೊಳಿಸಿದ ಕೇಂದ್ರ

Update: 2024-09-14 15:18 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ರಫ್ತು ಪ್ರಮಾಣ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಈರುಳ್ಳಿ ಮತ್ತು ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ದರ ಮಿತಿಯನ್ನು ಕೇಂದ್ರ ಸರಕಾರವು ರದ್ದುಗೊಳಿಸಿದೆ.

ಸರಕಾರವು ಈರುಳ್ಳಿಯ ಮೇಲಿನ ರಫ್ತು ಸುಂಕವನ್ನೂ ಸೇ.40ರಿಂದ ಶೇ.20ಕ್ಕೆ ಇಳಿಸಿದ್ದು,ಇದು ಸೆ.14ರಿಂದ ಜಾರಿಗೆ ಬಂದಿದೆ. ಶೇ.40ರಷ್ಟು ರಫ್ತು ಸುಂಕವು ಮೇ 4ರಿಂದ ಜಾರಿಯಲ್ಲಿತ್ತು.

ಮಹಾರಾಷ್ಟ್ರ ಮತ್ತು ಹರ್ಯಾಣಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಸರಕಾರದ ಈ ನಿರ್ಧಾರಗಳು ಹೊರಬಿದ್ದಿವೆ. ಹರ್ಯಾಣ ಮತ್ತು ಪಂಜಾಬ್ ಬಾಸ್ಮತಿ ಅಕ್ಕಿಯ ಹಾಗೂ ಮಹಾರಾಷ್ಟ್ರ ಈರುಳ್ಳಿಯ ಪ್ರಮುಖ ಉತ್ಪಾದಕ ರಾಜ್ಯಗಳಾಗಿವೆ.

ಬಾಸ್ಮತಿ ಅಕ್ಕಿಯ ಮೇಲಿನ ಪ್ರತಿ ಟನ್‌ಗೆ 950 ಡಾಲರ್ ಗಳ ಕನಿಷ್ಠ ರಫ್ತು ದರ (ಎಂಇಪಿ)ವನ್ನು ರದ್ದುಗೊಳಿಸಲಾಗಿದ್ದು, ಈ ಕ್ರಮವು ರಫ್ತುಗಳನ್ನು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ ಗೋಯಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರಕಾರದ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ಕ್ಕೆ ಸೂಚಿಸಲಾಗಿದೆ ಮತ್ತು ಅದು ಯಾವುದೇ ವಾಸ್ತವಿಕವಲ್ಲದ ಬೆಲೆಗಳಲ್ಲಿ ರಫ್ತು ಒಪ್ಪಂದಗಳ ಮೇಲೆ ನಿಕಟ ನಿಗಾವನ್ನು ಇರಿಸಲಿದೆ.

2023, ಅಕ್ಟೋಬರ್‌ನಲ್ಲಿ ಹೆಚ್ಚಿನ ದರಗಳು ರಫ್ತಿಗೆ ಅಡ್ಡಿಯಾಗುತ್ತಿವೆ ಎಂಬ ಕಳವಳಗಳ ನಡುವೆ ಸರಕಾರವು ಬಾಸ್ಮತಿ ಅಕ್ಕಿಯ ಎಂಇಪಿಯನ್ನು ಪ್ರತಿ ಟನ್‌ಗೆ 1,200 ಡಾಲರ್ ಗಳಿಂದ 950 ಡಾಲರ್ ಗಳಿಗೆ ಇಳಿಸಿತ್ತು.

ಬಾಸ್ಮತಿ ಅಕ್ಕಿಯ ಸೋಗಿನಲ್ಲಿ ಬಿಳಿ ಬಾಸ್ಮತಿಯೇತರ ಅಕ್ಕಿಯ ಸಂಭಾವ್ಯ ‘ಅಕ್ರಮ’ರಫ್ತನ್ನು ನಿರ್ಬಂಧಿಸಲು ಪ್ರತಿ ಟನ್ ಬಾಸ್ಮತಿ ಅಕ್ಕಿಗೆ 1,200 ಡಾಲರ್ ಗಿಂತ ಕಡಿಮೆ ದರದಲ್ಲಿ ರಫ್ತಿಗೆ ಅನುಮತಿಸದಿರಲು ಸರಕಾರವು 2023, ಆ.27ರಂದು ನಿರ್ಧರಿಸಿತ್ತು.

2023-24ರಲ್ಲಿ ಭಾರತವು ಒಟ್ಟು 5.9 ಶತಕೋಟಿ ಡಾಲರ್‌ ಮೌಲ್ಯದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದೆ. 2022-23ನೇ ಸಾಲಿನಲ್ಲಿ ಭಾರತವು 4.8 ಶತಕೋಟಿ ಡಾಲರ್‌ ಮೌಲ್ಯದ 45.6 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿತ್ತು.

ಬಾಸ್ಮತಿ ಬೆಳೆಯನ್ನು ಖಾರಿಫ್(ಬೇಸಿಗೆ ಬಿತ್ತನೆ) ಋತುವಿನಲ್ಲಿ ಬೆಳೆಯಲಾಗುತ್ತದೆ.    

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News