ನಾನೆಷ್ಟು ದಿನ ಜೈಲಿನಲ್ಲಿರಬೇಕು ಎಂಬ ಕುರಿತು ಪ್ರಧಾನಿ ಮೋದಿ ಮಾತ್ರ ಉತ್ತರಿಸಲು ಸಾಧ್ಯ: ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ನಾನೆಷ್ಟು ದಿನ ಜೈಲಿನಲ್ಲಿರಬೇಕು ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಮಾತ್ರ ಉತ್ತರಿಸಬಲ್ಲರು ಎಂದು ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಒಂದು ವೇಳೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೆ, ಅವರು ಮುಂದೆ ಪಿಣರಾಯಿ ವಿಜಯನ್ ಹಾಗೂ ಮಮತಾ ಬ್ಯಾನರ್ಜಿ ಅವರ ಸರಕಾರಗಳನ್ನೂ ಉರುಳಿಸುತ್ತಾರೆ ಎಂದು indianexpress.com ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
“ದೇಶವು ಕಠಿಣ ಪರಿಸ್ಥಿತಿಯನ್ನು ಹಾದು ಹೋಗುತ್ತಿದೆ. ಇದು ಅತ್ಯಂತ ಕಠಿಣ ಸಮಯ. ನಿಧಾನವಾಗಿ, ಈಗಂತೂ ವೇಗವಾಗಿ ದೇಶವು ಸರ್ವಾಧಿಕಾರದತ್ತ ತಿರುಗುತ್ತಿದೆ. ಅವರು (ಕೇಂದ್ರದಲ್ಲಿನ ಬಿಜೆಪಿ ಸರಕಾರ) ಮೊದಲು ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರನ್ನು ಬಂಧಿಸಿದರು. ನಂತರ ನನ್ನನ್ನು ಬಂಧಿಸಿದರು. ಈ ಬಂಧನದ ಮೂಲಕ, ಸುಳ್ಳು ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸಬಹುದಾದರೆ, ಯಾರನ್ನೂ ಬೇಕಾದರೂ ಬಂಧಿಸಬಲ್ಲೆವು ಎಂಬ ಸಂದೇಶವನ್ನು ದೇಶದ ಜನರಿಗೆ ನೀಡುತ್ತಿದ್ದಾರೆ. ಆ ಮೂಲಕ ಅವರನ್ನು ಹೆದರಿಸಬಹುದು ಹಾಗೂ ತಾವು ಹೇಳಿದಂತೆ ಜನರು ಕೇಳಬೇಕು ಎಂಬುದು ಅವರ ಉದ್ದೇಶವಾಗಿದೆ. ಇದು ಸರ್ವಾಧಿಕಾರದ ಚಿಹ್ನೆಗಳಾಗಿವೆ. ಪ್ರಜಾಪ್ರಭುತ್ವದಲ್ಲಿ ಅವರು ಜನರ ಮಾತನ್ನು ಕೇಳಬೇಕು. ಆದರೆ, ಅವರು ನಮ್ಮ ಮಾತು ಕೇಳಿ ಎಂದು ಜನರಿಗೆ ಸೂಚಿಸುತ್ತಿದ್ದಾರೆ. ನಾವು ಇಂತಹ ಪ್ರವೃತ್ತಿಯಿಂದ ದೇಶವನ್ನು ರಕ್ಷಿಸಬೇಕಿದೆ. ಇದೊಂದು ರೀತಿ ಸ್ವಾತಂತ್ರ್ಯ ಸಂಗ್ರಾಮ. ನನಗೆ ಪ್ರೇರಣೆ ನೀಡಿದ ಅನೇಕರು ಈ ಹೊತ್ತಿನಲ್ಲಿ ದೀರ್ಘಕಾಲದಿಂದ ಜೈಲಿನಲ್ಲಿದ್ದಾರೆ. ನಾನು ಜೈಲಿಗೆ ಹೋಗಿರುವುದು ದೇಶವನ್ನು ರಕ್ಷಿಸಲೇ ಹೊರತು, ನಾನು ಭ್ರಷ್ಟ ಎಂದಲ್ಲ. ಮನೀಶ್ ಸಿಸೋಡಿಯಾ ತಪ್ಪು ಮಾಡಿದ್ದಾರೆಂದಲ್ಲ. ಇದು ದೇಶದ ಸ್ವಾತಂತ್ರ್ಯಕ್ಕಾಗಿ ಜನರು ಜೈಲಿಗೆ ಹೋದಂತೆ. ನಾವೀಗ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಜೈಲಿಗೆ ಹೋಗುತ್ತಿದ್ದೇವೆ. ನಾನು ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧ ಎಂದು ಎಂದಿಗೂ ಹೇಳಿದ್ದೇನೆ. ಇದು ಹೋರಾಟದ ಒಂದು ಭಾಗ” ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
“ನಾನು ಯಾಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಮೊದಲು ವಿವರಿಸಲು ಬಯಸುತ್ತೇನೆ. ಜನರು ನನ್ನನ್ನು ಅಧಿಕಾರ ದಾಹಿ ಎಂದು ಟೀಕಿಸುತ್ತಿದ್ದಾರೆ. ಆದರೆ, ನಾನು ಅಧಿಕಾರ ಅಥವಾ ಹುದ್ದೆಗಾಗಿ ದಾಹಿಯಾಗಿಲ್ಲ. ನಾನು ಆದಾಯ ತೆರಿಗೆ ಆಯುಕ್ತನಾಗಿದ್ದಾಗ, ಆ ಹುದ್ದೆಯನ್ನು ದಿಲ್ಲಿಯ ಕೊಳೆಗೇರಿಗಳಿಗಾಗಿ ಕೆಲಸ ಮಾಡಲು 10 ವರ್ಷ ತೊರೆದಿದ್ದೆ. ನಾನು ಮುಖ್ಯಮಂತ್ರಿಯಾದಾಗ ಯಾವುದೇ ಪ್ರಚೋದನೆ ಇಲ್ಲದೆ 49 ದಿನಗಳೊಳಗಾಗಿ ರಾಜೀನಾಮೆ ಸಲ್ಲಿಸಿದ್ದೆ. ಇದನ್ನು ನಾನು ನನ್ನ ಸಿದ್ಧಾಂತಗಳಿಗಾಗಿ ಮಾಡಿದ್ದೆ. ಆದರೆ, ನಾನು ಈ ಬಾರಿ ರಾಜೀನಾಮೆ ನೀಡುವುದಿಲ್ಲ. ಯಾಕೆಂದರೆ, ಇದು ಹೋರಾಟದ ಭಾಗವಾಗಿದೆ. ಅವರಿಗೆ (ಬಿಜೆಪಿಗೆ) ನನ್ನನ್ನು ದಿಲ್ಲಿಯಲ್ಲಿ ಪರಾಭವಗೊಳಿಸಲು ಸಾಧ್ಯವಿಲ್ಲ ಎಂಬುದು ಅರ್ಥವಾಗಿದೆ. ಒಂದು ಸಂದರ್ಭದಲ್ಲಿ ನಾವು 67 ಸ್ಥಾನಗಳನ್ನು ಗಳಿಸಿದ್ದೆವು ಹಾಗೂ ಮತ್ತೊಂದು ಸಂದರ್ಭದಲ್ಲಿ 62 ಸ್ಥಾನಗಳನ್ನು ಗಳಿಸಿದ್ದೆವು. ಹೀಗಾಗಿ ಅವರಿಗೆ ಕೇಜ್ರಿವಾಲ್ ರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದು ಬೇಕಿದೆ. ಹೀಗಾಗಿ ಕೇಜ್ರಿವಾಲ್ ರಾಜೀನಾಮೆ ನೀಡಿದರೆ, ಅವರಿಗೆ ಸರಕಾರವನ್ನು ಉರುಳಿಸುವುದು ಸಾಧ್ಯವಾಗಲಿದೆ. ಇದು ಪ್ರಜಾಪ್ರಭುತ್ವದ ಪಾಲಿಗೆ ಅಪಾಯಕಾರಿ. ಇಂದು ನಾನೇನಾದರೂ ರಾಜೀನಾಮೆ ಸಲ್ಲಿಸಿದರೆ, ಅವರು ನಾಳೆ ಮಮತಾ ಬ್ಯಾನರ್ಜಿ ಹಾಗೂ ಪಿಣರಾಯಿ ವಿಜಯನ್ ಅವರ ಸರಕಾರಗಳನ್ನೂ ಉರುಳಿಸಲಿದ್ದಾರೆ. ಎಲ್ಲೆಲ್ಲ ಬಿಜೆಪಿ ಸೋಲುತ್ತದೋ ಅಲ್ಲೆಲ್ಲ ಮುಖ್ಯಮಂತ್ರಿಯನ್ನು ಬಂಧಿಸಿ, ಸರಕಾರವನ್ನು ಉರುಳಿಸಬಹುದಾಗಿದೆ. ಈ ಯುದ್ಧದಲ್ಲಿ ಹೋರಾಡಲೇಬೇಕಿದೆ. ಒಂದು ವೇಳೆ ಅವರು ಪ್ರಜಾಪ್ರಭುತ್ವವನ್ನು ಜೈಲಿಗೆ ಹಾಕಿದರೆ, ಪ್ರಜಾಪ್ರಭುತ್ವವನ್ನು ಜೈಲಿನಿಂದಲೇ ನಡೆಸಬೇಕಾಗುತ್ತದೆ. ಇದರ ವಿರುದ್ಧ ನಾವು ಹೋರಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಇದೇ ವೇಳೆ ತಾವು ತಪ್ಪಿತಸ್ಥರಲ್ಲದಿದ್ದರೂ, ತಮಗೇಕೆ ನ್ಯಾಯಾಲಯಗಳು ಜಾಮೀನು ಮಂಜೂರು ಮಾಡುತ್ತಿಲ್ಲ ಎಂಬ ಪ್ರಶ್ನೆಗೆ, ಬಿಜೆಪಿ ಸರಕಾರದ ಅವಧಿಯಲ್ಲಿ ಮಾರ್ಪಾಡಾಗಿರುವ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಕಾನೂನು ತಿದ್ದುಪಡಿಯತ್ತ ಬೊಟ್ಟು ಮಾಡಿದ್ದಾರೆ. ಅಪರಾಧ ಪ್ರಕ್ರಿಯೆಯ ಪ್ರಕಾರ, ಯಾವುದೇ ವ್ಯಕ್ತಿಯ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾದ ನಂತರ, ಆರೋಪಿಯ ವಿರುದ್ಧ ಸಾಕ್ಷ್ಯಗಳಿವೆಯೊ ಇಲ್ಲವೊ ಎಂದು ಪರಿಶೀಲಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡುವುದು ವಾಡಿಕೆ. ಆದರೆ, ತಿದ್ದುಪಡಿಯಾಗಿರುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಪ್ರಕಾರ, ಆರೋಪಿಯು ಮುಗ್ಧ ಎಂದು ನಿರೂಪಿತವಾಗಿರುವವರೆಗೂ ನ್ಯಾಯಾಲಯ ಜಾಮೀನು ನೀಡಲು ಅವಕಾಶವಿಲ್ಲ. ಹೀಗಾಗಿಯೇ ನಮಗಾರಿಗೂ ನ್ಯಾಯಾಲಯದಿಂದ ಜಾಮೀನು ದೊರೆಯುತ್ತಿಲ್ಲ ಎಂದು ಅವರು ಉತ್ತರಿಸಿದ್ದಾರೆ.
ಇದೇ ವೇಳೆ ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಆರೋಪದ ಕುರಿತು ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ಇದು ಸೂಕ್ತ ಸಮಯವಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯು 220ಕ್ಕೂ ಕಡಿಮೆ ಸ್ಥಾನಗಳನ್ನು ಗಳಿಸಲಿದ್ದು, ಇಂಡಿಯಾ ಮೈತ್ರಿಕೂಟವು 300ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿಯೂ ಆದ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.