ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಿಒಕೆ ಭಾರತದ ಭಾಗವಾಗಲಿದೆ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

Update: 2024-09-27 09:47 GMT

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ (PTI)

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ( ಪಿಒಕೆ)ವನ್ನು ಭಾರತದಲ್ಲಿ ವಿಲೀನಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಗುರುವಾರ ಜಮ್ಮುವಿನ ಆರ್.ಎಸ್.ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ತನ್ನ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಪಾಕಿಸ್ತಾನವು ಹೆಣಗಾಡುತ್ತಿದೆ ಮತ್ತು ಅದು ಒಡೆದು ಹೋಗುತ್ತಿದೆ ಎಂದು ಹೇಳಿದರು.

ರಾಮಗಡದಲ್ಲಿ ಇನ್ನೊಂದು ರ್ಯಾಲಿಯಲ್ಲಿ ಆದಿತ್ಯನಾಥ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಕೂಗುಗಳು ಹೆಚ್ಚುತ್ತಿವೆ ಎಂದು ಹೇಳಿದರು.

ಕಳೆದ ಮೇ ತಿಂಗಳಿನಲ್ಲಿ ಆಹಾರ ಬೆಲೆಯೇರಿಕೆ ಮತ್ತು ಹೆಚ್ಚಿನ ವಿದ್ಯುತ್ ಶುಲ್ಕಗಳನ್ನು ವಿರೋಧಿಸಿ ಪಿಒಕೆಯಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಆದಿತ್ಯನಾಥರ ಈ ಹೇಳಿಕೆಗಳು ಹೊರಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪಟ್ಟಕ್ಕೇರಿದರೆ ಆರು ತಿಂಗಳುಗಳಲ್ಲಿ ಪಿಒಕೆ ಭಾರತದ ಭಾಗವಾಗಲಿದೆ ಎಂದೂ ಆದಿತ್ಯನಾಥ್ ಆಗ ಹೇಳಿದ್ದರು.

ಜಮ್ಮು-ಕಾಶ್ಮೀರ ಚುನಾವಣೆಗಳ ಜೊತೆ ಪಿಒಕೆಯ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ಚುನಾವಣೆಗಳನ್ನು ನಡೆಸಿದರೆ ಅದು ಧನಾತ್ಮಕ ಸಂದೇಶವನ್ನು ರವಾನಿಸಲಿದೆ ಎಂದೂ ಆದಿತ್ಯನಾಥ್ ಗುರುವಾರ ತನ್ನ ಭಾಷಣದಲ್ಲಿ ಪ್ರತಿಪಾದಿಸಿದರು.

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನಗಳು ಈಗಾಗಲೇ ಪೂರ್ಣಗೊಂಡಿದ್ದು,‌ 40 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಅ.1ರಂದು ನಡೆಯಲಿದೆ. ಅ.8ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News