ಕೇರಳ | ಸ್ಫೋಟದಂಥ ಸದ್ದು : ಗ್ರಾಮದಿಂದ 280ಕ್ಕೂ ಹೆಚ್ಚು ಮಂದಿ ಸ್ಥಳಾಂತರ
ಮಲಪ್ಪುರಂ : ಇಲ್ಲಿನ ಅನಕ್ಕಲು ಪ್ರದೇಶದಲ್ಲಿ ಭೂಕಂಪನದೊಂದಿಗೆ ಸ್ಫೋಟದಂಥ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ, 280ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 287 ಮಂದಿ ಗ್ರಾಮಸ್ಥರನ್ನು ಶಾಲಾ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಮೊದಲ ಸ್ಫೋಟದ ಸದ್ದು ರಾತ್ರಿ 9.15ರ ವೇಳೆಗೆ ಕೇಳಿ ಬಂದಿದ್ದು, ಲಘು ಭೂಕಂಪನದೊಂದಿಗೆ ರಾತ್ರಿ 10.15 ಹಾಗೂ ರಾತ್ರಿ 10.45ರ ವೇಳೆಗೆ ಮತ್ತೆರಡು ಸ್ಫೋಟದ ಸದ್ದುಗಳು ಕೇಳಿ ಬಂದಿವೆ ಎಂದು ವರದಿಯಾಗಿದೆ. ಈ ಸ್ಫೋಟದ ಸದ್ದು 2 ಕಿಮೀ ವ್ಯಾಪ್ತಿಯವರೆಗೆ ಕೇಳಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಕಂದಾಯ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರಿಗೆ ಸುರಕ್ಷಿತ ಸೂರಿನ ವ್ಯವಸ್ಥೆ ಮಾಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬುಧವಾರ ಬೆಳಗ್ಗೆ ಗ್ರಾಮಸ್ಥರು ತಮ್ಮ ಮನೆಗೆ ಮರಳಲು ಪ್ರಾರಂಭಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.