ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆಯು RTI ವ್ಯಾಪ್ತಿಯನ್ನು ನಿರ್ಬಂಧಿಸುತ್ತದೆ: ಸಂಸದರಿಗೆ NCPRI ಪತ್ರ

Update: 2023-07-15 13:10 GMT

ಹೊಸದಿಲ್ಲಿ: ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆ (DPDP)ಯು ಆರ್ಟಿಐ ಕಾಯ್ದೆಯ ವ್ಯಾಪ್ತಿಯನ್ನು ತೀವ್ರವಾಗಿ ನಿರ್ಬಂಧಿಸುವ ಮೂಲಕ ಅದಕ್ಕೆ ತಿದ್ದುಪಡಿಯನ್ನು ತರಲು ಬಯಸಿದೆ. ನಿಯಮ ರಚನೆ ಮತ್ತು ಮೇಲುಸ್ತುವಾರಿ ಸಂಸ್ಥೆಗೆ ಸಂಬಂಧಿಸಿದಂತೆ ವ್ಯಾಪಕ ವಿವೇಚನಾಧಿಕಾರಗಳನ್ನು ಕೇಂದ್ರ ಸರಕಾರಕ್ಕೆ ನೀಡುವುದು ಮಸೂದೆಯ ಉದ್ದೇಶವಾಗಿದೆ ಎಂದು ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಷನ್ (NCPRI) ಸಂಸದರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

NCPRI ಪತ್ರದಲ್ಲಿ ಡಿಪಿಡಿಪಿ ಮಸೂದೆ ಕುರಿತು ತನ್ನ ಕಳವಳಗಳನ್ನು ಒತ್ತಿ ಹೇಳಿದೆ. ಮಸೂದೆಯು ಜು.20ರಂದು ಆರಂಭಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

ನವಂಬರ್, 2022ರಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾರ್ವಜನಿಕಗೊಳಿಸಿದ್ದ ಕರಡನ್ನು ಆಧರಿಸಿ ಆರ್ಟಿಐ ಕಾಯ್ದೆಗೆ ಪ್ರಸ್ತಾವಿತ ಬದಲಾವಣೆಗಳು ಸೇರಿದಂತೆ ಮಸೂದೆಯ ಬಗ್ಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿ ಎನ್ಸಿಪಿಆರ್ಐ ಸಂಸದರಿಗೆ ಈ ಪತ್ರವನ್ನು ಬರೆದಿದೆ.

ಸಚಿವಾಲಯವು ಪ್ರಸ್ತಾಪಿಸಿರುವ ಕರಡು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆಯು ಆರ್ಟಿಐ ಕಾಯ್ದೆಯ ನಿಬಂಧನೆಗಳೊಂದಿಗೆ ಕೆಲವು ರೀತಿಯ ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ಅಗತ್ಯವನ್ನು ಸಮತೋಲನಗೊಳಿಸಲು ಮಾರ್ಗಸೂಚಿ ಚೌಕಟ್ಟೊಂದನ್ನು ರೂಪಿಸುವ ನಿರೀಕ್ಷೆಯಿತ್ತು. ಆದರೆ ಕರಡು ಮಸೂದೆಯು ಇವೆರಡನ್ನೂ ರಕ್ಷಿಸುವಲ್ಲಿ ಮತ್ತು ಸಮನ್ವಯಗೊಳಿಸುವಲ್ಲಿ ವಿಫಲಗೊಂಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಆರ್ಟಿಐ ಕಾಯ್ದೆಯ 8(1)(ಜೆ) ಕಲಮ್ ಗೆ ಪ್ರಸ್ತಾವಿತ ತಿದ್ದುಪಡಿಯು ಎಲ್ಲ ವೈಯಕ್ತಿಕ ಮಾಹಿತಿಗಳಿಗೆ ವಿನಾಯಿತಿ ನೀಡಲು ಬಯಸಿದೆ. ಅದು ವೈಯಕ್ತಿಕ ಮಾಹಿತಿಯನ್ನೂ ಬಹಿರಂಗಗೊಳಿಸಲು ಸದ್ರಿ ಕಲಂ ಕಲ್ಪಿಸಿರುವ ಅವಕಾಶವನ್ನು ತೆಗೆದುಹಾಕಲಿದೆ. ಪ್ರಸ್ತುತ, ಕೋರಲಾದ ಮಾಹಿತಿಯು ಸಾರ್ವಜನಿಕ ಚಟುವಟಿಕೆಯೊಂದಿಗೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲವಾದರೆ ಅಥವಾ ಅದು ಖಾಸಗಿತನವನ್ನು ಅನಗತ್ಯವಾಗಿ ಆಕ್ರಮಿಸುತ್ತದೆಯಾದರೆ ಮಾತ್ರ ಅಂತಹ ಮಾಹಿತಿಯನ್ನು ಬಹಿರಂಗಗೊಳಿಸಲು ನಿರಾಕರಿಸಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಿರುವ ಎನ್‌ಸಿಪಿಆರ್‌ಐ, ಕೇವಲ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗ ಪಡಿಸುವುದಕ್ಕೆ ವಿನಾಯಿತಿ ಇದೆ,ಆದರೆ ಸಾರಾಸಗಟು ವಿನಾಯಿತಿಯು ಎಲ್ಲ ಮಾಹಿತಿಗಳಿಗೂ ಅನ್ವಯಿಸುವುದರಿಂದ ಸಮಸ್ಯಾತ್ಮಕವಾಗುತ್ತದೆ ಎಂದು ಹೇಳಿದೆ.

ಕರಡು ಮಸೂದೆಯ ಮೂಲಕ ಆರ್ಟಿಐ ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಪ್ರಸ್ತಾವವು ಆರ್ಟಿಐ ಕಾನೂನಿನ ತಪ್ಪು ಅರ್ಥೈಸುವಿಕೆಯನ್ನು ಆಧರಿಸಿದೆ ಎಂದೂ ಪತ್ರದಲ್ಲಿ ವಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News