ಪ.ಜಾ., ಪ.ಪಂ. ಮಹಿಳೆಯರ ಖಾತೆಗೆ 1 ಲಕ್ಷ ರೂ. ವರ್ಗಾವಣೆ : ರಾಹುಲ್ ಗಾಂಧಿ

Update: 2024-04-08 16:41 GMT

ರಾಹುಲ್ ಗಾಂಧಿ | PC : PTI 

 

ಸಿಯೋನಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಜಯ ಗಳಿಸುವ ಆತ್ಮವಿಶ್ವಾಸವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೂತನ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂ. ವರ್ಗಾಯಿಸಲಿದೆ ಎಂದು ಹೇಳಿದ್ದಾರೆ.

ಮಂದ್ಲಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಸಿಯೋನಿ ಜಿಲ್ಲೆಯ ಧನೋರಾದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿರುದ್ಯೋಗಿ ಯುವ ಜನರಿಗೆ ಖಾತರಿಪಡಿಸಿದ ಶಿಷ್ಯ ವೃತ್ತಿ ಒದಗಿಸುವ ಭರವಸೆ ನೀಡಿದರು.

‘‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಬಡ ಕುಟುಂಬಗಳ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1 ಲಕ್ಷ ರೂ. ವರ್ಗಾಯಿಸುವಂತಹ ಮೂರರಿಂದ ನಾಲ್ಕು ಕ್ರಾಂತಿಕಾರಿ ಹೆಜ್ಜೆಗಳನ್ನು ನಮ್ಮ ಪ್ರಣಾಳಿಕೆ ಉಲ್ಲೇಖಿಸಿದೆ. ಈ ಮೂಲಕ ನಾವು ಪ್ರತಿ ತಿಂಗಳು ಅವರ ಖಾತೆಗಳಿಗೆ ಸಾವಿರಾರು ರೂಪಾಯಿ ವರ್ಗಾಯಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

‘‘ದೇಶದ ನಿರುದ್ಯೋಗಿ ಯುವ ಜನರಿಗೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಒಂದು ವರ್ಷ ಶಿಷ್ಯ ವೃತ್ತಿ ಹಾಗೂ ಈ ಅವಧಿಯಲ್ಲಿ 1 ಲಕ್ಷ ರೂ. ಭತ್ತೆಯ ಖಾತರಿ ನೀಡುವ ನೂತನ ಕಾನೂನನ್ನು ನಾವು ಜಾರಿಗೆ ತರಲಿದ್ದೇವೆ’’ ಎಂದು ರಾಹುಲ್ ಗಾಂಧಿ ಹೇಳಿದರು.

‘‘ಕೇಂದ್ರದಲ್ಲಿ ಸರಕಾರ ರೂಪಿಸಿದ ಬಳಿಕ ನಾವು ಉದ್ಯೋಗದಲ್ಲಿ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಿದ್ದೇವೆ. ಸಾರ್ವಜನಿಕ ವಲಯದಲ್ಲಿ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ರೈತರು ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಲಿದ್ದೇವೆ’’ ಎಂದು ಅವರು ತಿಳಿಸಿದರು.

ಬಿಜೆಪಿ ಬುಡಕಟ್ಟು ಜನರನ್ನು ಆದಿವಾಸಿ ಎಂದು ಕರೆಯುವ ಬದಲು ಉದ್ದೇಶಪೂರ್ವಕವಾಗಿ ‘ವನವಾಸಿ’ ಎಂದು ಕರೆಯುತ್ತಿದೆ. ಅವರನ್ನು ಭೂಮಿಯಿಂದ ಪ್ರತ್ಯೇಕಿಸಲು ಹಾಗೂ ನೀರು, ಅರಣ್ಯ, ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುಲು ಬಿಜೆಪಿ ಅವರನ್ನು ವನವಾಸಿ ಎಂದು ಕರೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News