ಮನಮೋಹನ್ ಸಿಂಗ್ ಪ್ರಜಾಪ್ರಭುತ್ವವನ್ನು ಸಬಲಗೊಳಿಸುತ್ತಿದ್ದಾರೆ: ಮಾಜಿ ಪ್ರಧಾನಿಯ ಕರ್ತವ್ಯ ಪ್ರಜ್ಞೆಗೆ ಪ್ರಧಾನಿ ಮೋದಿ ಶ್ಲಾಘನೆ

Update: 2024-02-08 08:59 GMT

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (PTI)

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶಾಸನ ನಿರ್ಮಾತೃಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ಶ್ಲಾಘಿಸಿದ್ದಾರೆ. 

ನಿವೃತ್ತ ಸದಸ್ಯರಿಗೆ ಬೀಳ್ಕೊಡುಗೆ ಭಾಷಣ ಮಾಡುವಾಗ ಪ್ರಮುಖ ಶಾಸನವೊಂದರ ಮಸೂದೆಗೆ ಮತ ಚಲಾಯಿಸಲು ಡಾ. ಮನಮೋಹನ್ ಸಿಂಗ್ ಅವರು ಗಾಲಿ ಕುರ್ಚಿಯಲ್ಲಿ ಸದನಕ್ಕೆ ಆಗಮಿಸಿದ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

"ಸದನದಲ್ಲಿ ಮತದಾನ ನಡೆಯುವ ಸಂದರ್ಭದಲ್ಲಿ ಖಜಾಂಚಿ ಪೀಠವು ಗೆಲುವು ಸಾಧಿಸುತ್ತದೆ ಎಂದು ತಿಳಿದಿದ್ದರೂ, ತಮ್ಮ ಮತ ಚಲಾಯಿಸಲು ಡಾ. ಮನಮೋಹನ್ ಸಿಂಗ್ ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ಸದಸ್ಯರೊಬ್ಬರ ಕರ್ತವ್ಯ ಪ್ರಜ್ಞೆಗೆ ಇದು ನಿದರ್ಶನ. ಅವರು ನಮಗೆ ಸ್ಫೂರ್ತಿದಾಯಕ ಉದಾಹರಣೆಯಾಗಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ದಿಲ್ಲಿ ಸರ್ಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೆಚ್ಚು ಅಧಿಕಾರ ನೀಡುವ ಪ್ರಮುಖ ಮಸೂದೆಯೊಂದರ ಚರ್ಚೆಯ ಸಂದರ್ಭದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಗಾಲಿ ಕುರ್ಚಿಯಲ್ಲಿ ಸದನಕ್ಕೆ ಆಗಮಿಸಿದ್ದರು. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲೂ ಕೂಡಾ ಅವರು ಗಾಲಿ ಕುರ್ಚಿಯ ಮೇಲೆ ಸದನಕ್ಕೆ ಆಗಮಿಸಿ, ತಮ್ಮ ಮತ ಚಲಾಯಿಸಿದ್ದರು.

"ಅವರು ಯಾರನ್ನು ಬೆಂಬಲಿಸಿ ಮತ ಚಲಾಯಿಸಿದರು ಎಂಬುದು ಮುಖ್ಯವಲ್ಲ. ಆದರೆ, ಅವರು ಕೇವಲ ಪ್ರಜಾಪ್ರಭುತ್ವವನ್ನು ಸಬಲಗೊಳಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆಯಾಗಿದೆ" ಎಂದು ಪ್ರಧಾನಿ ಮೋದಿ ಪ್ರಶಂಸಿಸಿದರು. ಅಲ್ಲದೆ, ಮನಮೋಹನ್ ಸಿಂಗ್ ಅವರು ದೀರ್ಘಕಾಲ ಜೀವಿಸಿ, ನಮಗೆ ಮಾರ್ಗದರ್ಶನ ನೀಡುತ್ತಿರಲಿ" ಎಂದೂ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News