ಜಾಗತಿಕ ಅಸಹಿಷ್ಣುತೆ ನಿವಾರಣೆಗೆ ನಾರಾಯಣ ಗುರುಗಳ ಬೋಧನೆ ಅಗತ್ಯವಾಗಿದೆ: ಪೋಪ್ ಫ್ರಾನ್ಸಿಸ್

Update: 2024-12-03 10:24 GMT

ಪೋಪ್ ಫ್ರಾನ್ಸಿಸ್ (Photo: PTI)

ತಿರುವನಂತಪುರಂ: ಎಲ್ಲೆಡೆ ದ್ವೇಷ ಹೆಚ್ಚುತ್ತಿರುವಾಗ ಜಾಗತಿಕ ಅಸಹಿಷ್ಣುತೆ ನಿವಾರಣೆಗೆ ಶ್ರೀ ನಾರಾಯಣ ಗುರುಗಳು ಮನುಕುಲದ ಏಕತೆಗಾಗಿ ಸಾರಿದ ಸಂದೇಶದ ಪಾಲನೆ ಅತ್ಯಗತ್ಯವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರು ಅವರು ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿ 1924ರಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮದ ಸ್ಮರಣೆಯ ಹಿನ್ನೆಲೆ ವ್ಯಾಟಿಕನ್‌ ನಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್, ವಿಶ್ವದಾದ್ಯಂತ ಹೆಚ್ಚುತ್ತಿರುವ ದ್ವೇಷ ಮತ್ತು ಅಸಹಿಷ್ಣುತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀ ನಾರಾಯಣ ಗುರುಗಳ ಬೋಧನೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಜನರು ಮತ್ತು ರಾಷ್ಟ್ರಗಳ ನಡುವೆ ಅಸಹಿಷ್ಣುತೆ ಮತ್ತು ದ್ವೇಷದ ನಿದರ್ಶನಗಳು ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ ನಾರಾಯಣ ಗುರುಗಳ ಸಾರ್ವತ್ರಿಕ ಮಾನವ ಏಕತೆಯ ಸಂದೇಶವು ನಿರ್ಣಾಯಕವಾಗಿದೆ ಎಂದು ಪೋಪ್ ಹೇಳಿದ್ದಾರೆ.

ನಾರಾಯಣ ಗುರುಗಳು ತಮ್ಮ ಸಂದೇಶದ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, ಯಾವುದೇ ರೀತಿಯಲ್ಲಿ ಯಾರದ್ದೇ ವಿರುದ್ಧ ಯಾವುದೇ ತಾರತಮ್ಯ ಇರಬಾರದು ಎಂದು ನಾರಾಯಣ ಗುರುಗಳು ಹೇಳಿದ್ದಾರೆ ಎಂದು ಪೋಪ್ ಹೇಳಿದ್ದಾರೆ.

ನಾರಾಯಣ ಗುರುಗಳು ಪ್ರತಿಯೊಬ್ಬರೂ ತಮ್ಮದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚಾರಗಳನ್ನು ಹೊಂದಿರುವುದರ ಹೊರತಾಗಿಯೂ, ಒಂದೇ ಮಾನವ ಕುಟುಂಬದ ಸದಸ್ಯರು ಎಂಬ ಸಂದೇಶವನ್ನು ಸಾರಿದ್ದರು. ಧರ್ಮ, ಸಾಮಾಜಿಕ ಸ್ಥಿತಿ, ಜನಾಂಗ, ಬಣ್ಣ, ಭಾಷೆಯ ಆಧಾರದ ಹಿಂಸಾಚಾರ, ತಾರತಮ್ಯ ಮತ್ತು ಪ್ರತ್ಯೇಕತೆಯು ಹಲವೆಡೆ ನಿತ್ಯವೂ ನಡೆಯುತ್ತಿದೆ. ಅದರಲ್ಲೂ, ಬಡವರು, ದುರ್ಬಲರು, ದಮನಿತರಲ್ಲಿ ಇದು ಸಾಮಾನ್ಯವೆಂಬಂತಾಗಿರುವುದು ದುಃಖದ ಸಂಗತಿ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ವ್ಯಾಟಿಕನ್ ನಲ್ಲಿ ಆಯೋಜಿಸಲಾದ ಈ ಸಮ್ಮೇಳನದಲ್ಲಿ ಕೇರಳದ ಪ್ರಮುಖ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News