2025ರ ಜುಬಿಲೀ ವರ್ಷದ ಬಳಿಕ ಪೋಪ್ ಭಾರತ ಭೇಟಿ : ಕೇಂದ್ರ ಸಚಿವ ಜಾರ್ಜ್ ಕುರಿಯನ್

Update: 2024-12-07 13:49 GMT

 ಪೋಪ್ ಫ್ರಾನ್ಸಿಸ್ | PC : PTI 

ಹೊಸದಿಲ್ಲಿ : ಕೆಥೋಲಿಕ್ ಚರ್ಚ್ 2025ರ ವರ್ಷವನ್ನು ‘ಜುಬಿಲೀ ಯಿಯರ್’’ (ಸಂಭ್ರಮಾಚರಣೆಯ ವರ್ಷ) ಎಂಬುದಾಗಿ ಘೋಷಿಸಿದ್ದು, ಆ ಬಳಿಕ ಪೋಪ್ ಫ್ರಾನ್ಸಿಸ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವ ಜಾರ್ಜ್ ಕುರಿಯನ್ ಶನಿವಾರ ಹೇಳಿದ್ದಾರೆ.

ಭಾರತವು ಈಗಾಗಲೇ ಪೋಪ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಆಮಂತ್ರಿಸಿದೆ ಎಂದು ಕುರಿಯನ್ ತಿಳಿಸಿದರು. ಪೋಪ್‌ರನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಭೇಟಿಯಾಗಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

ಭೇಟಿಯ ಅಂತಿಮ ವ್ಯವಸ್ಥೆಗಳು ಮತ್ತು ವೇಳಾಪಟ್ಟಿಯನ್ನು ಕೆಥೋಲಿಕ್ ಚರ್ಚ್‌ನ ಕೇಂದ್ರ ಸ್ಥಳ ವ್ಯಾಟಿಕನ್ ನಿರ್ಧರಿಸಲಿದೆ.

ಪೋಪ್ ಫ್ರಾನ್ಸಿಸ್‌ರ ಲಭ್ಯತೆಯನ್ನು ಆಧರಿಸಿ ಅವರ ಭೇಟಿ ನಡೆಯಲಿದೆ ಎಂದು ಸಚಿವರು ಏಶ್ಯಾನೆಟ್ ಚಾನೆಲ್‌ಗೆ ತಿಳಿಸಿದರು.

‘‘ಪಡೆದಿರುವ ಮಾಹಿತಿಗಳ ಆಧಾರದಲ್ಲಿ, ಜುಬಿಲೀ ವರ್ಷದ ಬಳಿಕ ಪೋಪ್ ಫ್ರಾನ್ಸಿಸ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅವರ ಭಾರತ ಭೇಟಿ ಎಷ್ಟು ಸಾಧ್ಯವೋ ಅಷ್ಟು ಬೇಗ ನಡೆಯಲಿದೆ ಎಂದು ನಾವು ಆಶಿಸುತ್ತೇವೆ’’ ಎಂದು ಸಚಿವರು ಹೇಳಿದರು.

ಪೋಪ್ ಫ್ರಾನ್ಸಿಸ್ ಶನಿವಾರ ಆರ್ಚ್‌ಬಿಶಪ್ ಜಾರ್ಜ್ ಜಾಕೋಬ್ ಕೂವಕಾಡ್‌ರನ್ನು ಕಾರ್ಡಿನಲ್ ಆಗಿ ನೇಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯಾಟಿಕನ್‌ಗೆ ತೆರಳಿರುವ ಭಾರತೀಯ ನಿಯೋಗದಲ್ಲಿ ಸಚಿವ ಕುರಿಯನ್ ಕೂಡ ಇದ್ದಾರೆ.

ಕೇರಳದ 51 ವರ್ಷದ ಜಾರ್ಜ್ ಜಾಕೋಬ್ ಕೂವಕಾಡ್, 2020ರಿಂದ ಪೋಪ್ ಫ್ರಾನ್ಸಿಸ್‌ರ ಅಂತರರಾಷ್ಟ್ರೀಯ ಪ್ರವಾಸಗಳನ್ನು ಏರ್ಪಡಿಸುತ್ತಿದ್ದಾರೆ. ಕಾರ್ಡಿನಲ್ ಹುದ್ದೆಗೆ ಭಡ್ತಿಗೊಂಡಿರುವ 21 ಮಂದಿಯಲ್ಲಿ ಅವರೂ ಒಬ್ಬರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News