"ಮೊದಲು ಮೂಲಭೂತ ಅಂಶ ಸರಿಪಡಿಸಿ, ನಂತರ ವಂದೇ ಭಾರತ್‌ ನಂತಹ ಐಷಾರಾಮಿ ಆರಂಭಿಸಿ": ರೈಲ್ವೇ ಇಲಾಖೆಗೆ ಜನರ ತರಾಟೆ

Update: 2024-11-11 06:51 GMT

Photo credit: indiatoday.in

ಹೊಸದಿಲ್ಲಿ: ರೈಲು ಬೋಗಿಗಳನ್ನು ಬೇರ್ಪಡಿಸುವ ವೇಳೆ ರೈಲ್ವೇ ಉದ್ಯೋಗಿ ಮೃತಪಟ್ಟಿರುವ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ರೈಲ್ವೇಯಲ್ಲಿನ ಮೂಲಭೂತ ಅಂಶಗಳನ್ನೇ ಸರಿಪಡಿಸದೆ ಐಷಾರಾಮಿ ವ್ಯವಸ್ಥೆಯ ಕಡೆಗೆ ಗಮನ ಕೊಟ್ಟಿರುವ ಸರ್ಕಾರ ಮತ್ತು ರೈಲ್ವೇ ಇಲಾಖೆಯನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಶನಿವಾರ (ನ.09) ಬಿಹಾರದ ಬೇಗುಸರಾಯ್‌ ಜಿಲ್ಲೆಯ ಬರೌನಿ ಜಂಕ್ಷನ್‌ನಲ್ಲಿ ಲಕ್ನೋ-ಬರೌನಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 15204ರ ಬೋಗಿ ಡಿಕಪ್ಲಿಂಗ್‌ ಮಾಡುವಾಗ ರೈಲ್ವೆ ಉದ್ಯೋಗಿ ಅಮರ್ ಕುಮಾರ್ ರಾವುತ್ ಮೃತಪಟ್ಟಿದ್ದಾರೆ. ಬರೌನಿ ಜಂಕ್ಷನ್‌ನಲ್ಲಿ ನಿಂತಿದ್ದ ರೈಲಿನ ಬೋಗಿಗಳನ್ನು ಬೇರ್ಪಡಿಸುವಾಗ ಚಾಲಕ ಆಕಸ್ಮಿಕವಾಗಿ ಇಂಜಿನ್ ಅನ್ನು ಹಿಮ್ಮುಖ ಚಲಾಯಿಸಿದ್ದು, ಪರಿಣಾಮವಾಗಿ ಅಮರ್ ಅವರು ಎರಡು ಬೋಗಿಗಳ ನಡುವೆ ಸಿಲುಕಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆ, ಮಾನವ ಜೀವದ ಕುರಿತು ರೈಲ್ವೇ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದೆ. ರೈಲು ಬೋಗಿಗಳ ಜೋಡಣೆ ಮತ್ತು ಬೇರ್ಪಡಿಸುವಿಕೆಗೆ ಸ್ವಯಂಚಾಲಿತ ವ್ಯವಸ್ಥೆಗಳು ಬಂದಿದ್ದರೂ, ಭಾರತೀಯ ರೈಲ್ವೇ ಹಳೆಯ ಮಾದರಿಯ ಕಪ್ಲಿಂಗ್‌ ವ್ಯವಸ್ಥೆಯನ್ನೇ ಅವಲಂಬಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಮೃತ ರೈಲ್ವೇ ಉದ್ಯೋಗಿಗೆ ಸಂತಾಪ ಸೂಚಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಭಾರತೀಯ ರೈಲ್ವೇ ವಂದೇ ಭಾರತ್‌ ನಂತಹ ಐಷಾರಾಮಿ ವ್ಯವಸ್ಥೆಯನ್ನು ಪ್ರಾರಂಭಿಸುವ ಬದಲು ಮೂಲಭೂತ ಅಂಶಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

“ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವ ಬದಲು, ಎಲ್ಲಾ ರೈಲುಗಳಲ್ಲಿ ಸ್ವಯಂಚಾಲಿತ ರೈಲು ಜೋಡಣೆಯನ್ನು ಕಡ್ಡಾಯಗೊಳಿಸಿ. ಮೊದಲು ಮೂಲಭೂತ ಅಂಶಗಳನ್ನು ಸರಿಪಡಿಸೋಣ, ನಂತರ ಐಷಾರಾಮಿ ಗುರಿಯನ್ನು ಹೊಂದೋಣ” ಎಂದು ರಾಮ್‌ಕರಣ್‌ ಖೈರಿ ಎಂಬವರು ಟ್ವೀಟ್‌ ಮಾಡಿದ್ದಾರೆ.


“ರೈಲ್ವೇಯನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳ ವಿದೇಶಿ ಪ್ರವಾಸಕ್ಕೆ ಭಾರತೀಯ ರೈಲ್ವೇಯು ತುಂಬಾ ಹಣವನ್ನು ಖರ್ಚು ಮಾಡುತ್ತದೆ. ಆದರೆ ಭಾರತೀಯ ರೈಲ್ವೆಯನ್ನು ಮೇಲ್ದರ್ಜೆಗೇರಿಸಲಾಗಿದೆಯೇ? ರೈಲನ್ನು ಜೋಡಿಸುವಾಗ ಹಳಿಗಳ ಮೇಲೆ ಅನೇಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ” ಎಂದು RRB NTPC CANDIDATE VOICE ಎಂಬ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News