ಮಹಾರಾಷ್ಟ್ರದಲ್ಲಿ ಹೊಸ ಸರಕಾರ ರಚನೆ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಜಫ್ತಿ ಮಾಡಿದ್ದ ಅಜಿತ್ ಪವಾರ್ ಅವರ 1,000 ಕೋಟಿ ರೂ. ಮೌಲ್ಯದ ಆಸ್ತಿ ವಾಪಾಸ್
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆದಾಯ ತೆರಿಗೆ ಇಲಾಖೆಯು 2021ರಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಾಪಸ್ ನೀಡಿದೆ.
ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿ ಅಜಿತ್ ಪವಾರ್ ಕುಟುಂಬದ ವಿರುದ್ಧದ ಬೇನಾಮಿ ಆಸ್ತಿ ಪ್ರಕರಣವನ್ನು ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾಗಿ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಅಜಿತ್ ಪವಾರ್ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ 2021ರ ಅಕ್ಟೋಬರ್ 7ರಂದು ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಬೇನಾಮಿ ಆಸ್ತಿ ಪ್ರಕರಣದಲ್ಲಿ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದಿಲ್ಲಿಯ ಫ್ಲಾಟ್, ಗೋವಾದ ರೆಸಾರ್ಟ್ ಸೇರಿದಂತೆ ಹಲವು ಆಸ್ತಿಗಳನ್ನು ಜಫ್ತಿ ಮಾಡಲಾಗಿತ್ತು.
ತನಿಖೆಯ ವೇಳೆ ಯಾವುದೇ ಆಸ್ತಿಯನ್ನು ಅಜಿತ್ ಪವಾರ್ ಹೆಸರಿನಲ್ಲಿ ನೋಂದಾಯಿಸಲಾಗಿಲ್ಲ ಎಂದು ಕಂಡು ಬಂದಿದೆ. ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಪೀಠವು ಆರೋಪಗಳನ್ನು ತಿರಸ್ಕರಿಸಿದೆ. ಅಜಿತ್ ಪವಾರ್ ಅಥವಾ ಅವರ ಕುಟುಂಬಸ್ಥರು ಬೇನಾಮಿ ಆಸ್ತಿ ಪಡೆಯಲು ಹಣ ವರ್ಗಾವಣೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.