ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಏರಿಕೆ ಕುರಿತು ಚರ್ಚಿಸಬೇಕು: ಸದಸ್ಯರನ್ನು ಆಗ್ರಹಿಸಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್

Update: 2023-12-13 15:39 GMT

ಜಗದೀಪ್ ಧನಕರ್ | Photo: PTI 


ಹೊಸದಿಲ್ಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡದಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ವಿಷಯವನ್ನು ರಾಜ್ಯ ಸಭಾಧ್ಯಕ್ಷ ಜಗದೀಪ್ ಧನಕರ್ ಬುಧವಾರ ಒಪ್ಪಿಕೊಂಡಿದ್ದಾರೆ.

ಈ ಕುರಿತ ಚರ್ಚೆಗೆ ಪ್ರಸ್ತಾವ ಮಂಡಿಸುವಂತೆ ಅವರು ರಾಜ್ಯ ಸಭೆಯ ಸದಸ್ಯರನ್ನು ಆಗ್ರಹಿಸಿದ್ದಾರೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಕುರಿತಂತೆ ಐದು ಪೂರಕ ಪ್ರಶ್ನೆಗಳನ್ನು ಎತ್ತಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಲ್ಲಾ ಮೌಖಿಕ ಪೂರಕ ಪ್ರಶ್ನೆಗಳಿಗೆ ಉತ್ತರ ನೀಡಿದ ಹೊರತಾಗಿಯೂ, ಈ ವಿಷಯದ ಕುರಿತಂತೆ ಸದಸ್ಯರು ತಮ್ಮ ಆತಂಕ ಹಾಗೂ ಕಳವಳಗಳಿಗೆ ಉತ್ತರ ನೀಡುವಂತೆ ಪಟ್ಟು ಹಿಡಿದರು.

ವಿಷಯದ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡ ಧನಕರ್, ‘‘ಇದು ನಾವು ಚರ್ಚಿಸಬೇಕಾದ ವಿಷಯ. ಇದರಿಂದ ನಾವು ಅತಿ ದೊಡ್ಡ ಕೊಡುಗೆಗಳನ್ನು ನೀಡಲು ಸಾಧ್ಯ ಎಂದು ನಾನು ಗೌರವಾನ್ವಿತ ಸದಸ್ಯರಿಗೆ ತಿಳಿಸುತ್ತೇನೆ’’ ಎಂದರು.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆಗೊಳಿಸಲು ಹಾಗೂ ಶೂನ್ಯಕ್ಕೆ ಇಳಿಸಲು ಪೂರಕ ಪರಿಸರವನ್ನು ರೂಪಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

‘‘ಈ ನಿಟ್ಟಿನಲ್ಲಿ ಕೊಡುಗೆ ನೀಡುವಲ್ಲಿ ಪ್ರತಿಯೊಬ್ಬರಿಗೂ ಪಾತ್ರವಿದೆ. ಈ ಬಗ್ಗೆ ಸದಸ್ಯರು ಚರ್ಚೆ ನಡೆಸಲು ಬಯಸಿದರೆ, ನಾನು ಚರ್ಚೆಗೆ ಸಿದ್ದನಿದ್ದೇನೆ’’ ಎಂದು ಅವರು ಹೇಳಿದರು.

ಇದಕ್ಕಿಂತ ಮೊದಲು ಸದನದಲ್ಲಿ ಮೌಖಿಕ ಪ್ರಶ್ನೆಗಳಿಗೆ ಉತ್ತರಿಸಿದ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಪ್ರಕಾರ 2022ರಲ್ಲಿ 1,70,974 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,051 ಅಥವಾ ಶೇ. 1.2 ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಎಂದು ತಿಳಿಸಿದ್ದರು.

‘‘ನಾನು ಇದರ (ವಿದ್ಯಾರ್ಥಿಗಳ ಆತ್ಮಹತ್ಯೆ) ಜವಾಬ್ದಾರಿ ಹೊರುತ್ತೇನೆ. ಇದು ಶೂನ್ಯಕ್ಕೆ ಇಳಿಯಬೇಕು’’ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News