ಲಂಡನ್‌ನಿಂದ ತರಲು ಉದ್ದೇಶಿಸಿರುವ ಶಿವಾಜಿಯ ಐತಿಹ್ಯ ಹುಲಿ ಉಗುರುಗಳು ನೈಜವಾದುದಲ್ಲ : ಇತಿಹಾಸಕಾರ ಇಂದ್ರಜಿತ್ ಸಾವಂತ್ ಆರೋಪ
ಮುಂಬೈ: ಮಹಾರಾಷ್ಟ್ರ ಸರಕಾರವು ಲಂಡನ್‌ನಿಂದ ತರಲು ಉದ್ದೇಶಿಸಿರುವ ಶಿವಾಜಿಯ ಹುಲಿ ಉಗುರಿನ ಆಕಾರದ ಆಯುಧವು ನೈಜವಾದುದಲ್ಲ ಎಂದು ಸೋಮವಾರ ಇತಿಹಾಸಕಾರ ಇಂದ್ರಜಿತ್ ಸಾವಂತ್ ಆರೋಪಿಸಿದ್ದಾರೆ. ಶಿವಾಜಿಯ ಆ ಆಯುಧವು ರಾಜ್ಯದ ಸತಾರಾದಲ್ಲೇ ಉಳಿದಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
1659ರಲ್ಲಿ ಬಿಜಾಪುರದ ಸುಲ್ತಾನರ ದಂಡನಾಯಕ ಅಫ್ಝಲ್ ಖಾನ್‌ರನ್ನು ಹತ್ಯೆಗೈಯ್ಯಲು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಬಳಸಿದ್ದ ಹುಲಿ ಉಗುರಿನ ಆಕಾರದ ಆಯುಧವನ್ನು ಲಂಡನ್ ಮೂಲದ ವಸ್ತು ಸಂಗ್ರಹಾಲಯದಿಂದ ಮಹಾರಾಷ್ಟ್ರಕ್ಕೆ ಮರಳಿ ತರಲು ಮಹಾರಾಷ್ಟ್ರ ಸರಕಾರವು ಕಳೆದ ವರ್ಷ ಒಡಂಬಡಿಕೆಗೆ ಸಹಿ ಹಾಕಿತ್ತು.
ಈ ಕುರಿತು ಕೊಲ್ಹಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಇಂದ್ರಜಿತ್ ಸಾವಂತ್, "ಹುಲಿ ಉಗುರಿನ ಆಕಾರದ ಆಯುಧವನ್ನು ಮೂರು ವರ್ಷಗಳ ಅವಧಿಗೆ ರೂ. 30 ಕೋಟಿ ಸಾಲದ ಒಪ್ಪಂದದ ಮೇರೆಗೆ ಮಹಾರಾಷ್ಟ್ರಕ್ಕೆ ತರಲಾಗುತ್ತಿದೆ. ಆದರೆ, ತಮ್ಮ ಸ್ವಾಧೀನದಲ್ಲಿರುವ ಹುಲಿ ಉಗುರಿನ ಆಕಾರದ ಆಯುಧವು ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೇ ಸೇರಿದ್ದು ಎಂಬ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಲಂಡನ್‌ನಲ್ಲಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತು ಸಂಗ್ರಹಾಲಯವು ನನ್ನ ಪತ್ರಕ್ಕೆ ಪ್ರತಿಕ್ರಿಯಿಸಿದೆ" ಎಂದು ಹೇಳಿದ್ದಾರೆ.
"ಸಾಲದ ಒಪ್ಪಂದಕ್ಕೆ ಸಹಿ ಮಾಡಲು ಸಚಿವ ಸುಧೀರ್ ಮುಂಗಂತಿವರ್ ನೇತೃತ್ವದಲ್ಲಿ ಮಹಾರಾಷ್ಟ್ರದಿಂದ ಲಂಡನ್‌ಗೆ ತೆರಳಿದ್ದ ತಂಡಕ್ಕೆ ಈ ಮಾಹಿತಿಯನ್ನು ಪ್ರದರ್ಶಿಸುವಂತೆ ಸೂಚಿಸಲಾಗಿತ್ತು. ನೈಜ ಹುಲಿ ಉಗುರಿನ ಆಯುಧವು ಸತಾರಾದಲ್ಲೇ ಇದೆ" ಎಂದು ಅವರು ಪ್ರತಿಪಾದಿಸಿದ್ದಾರೆ.
ಆದರೆ, ಇಂದ್ರಜಿತ್ ಸಾವಂತ್ ಅವರ ಈ ಪ್ರತಿಪಾದನೆಯನ್ನು ಅಲ್ಲಗಳೆದಿರುವ ಸಚಿವ ಶಂಭುರಾಜ್ ದೇಸಾಯಿ, "ನಮ್ಮ ಸರಕಾರವು ವಿವರಗಳನ್ನು ಪರಿಶೀಲಿಸಿದ ನಂತರವೇ ಒಡಂಬಡಿಕೆಗೆ ಸಹಿ ಹಾಕಿದೆ. ಒಂದು ವೇಳೆ ಇತಿಹಾಸಕಾರರಿಗೆ ಮತ್ತೊಂದು ಬಗೆಯ ದೃಷ್ಟಿಕೋನವಿದ್ದರೆ, ಆ ವಿಷಯವನ್ನು ನಮ್ಮ ಸರಕಾರವು ಪರಿಹರಿಸಲಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.