ನಾಲ್ಕು ವರ್ಷಗಳಿಂದ ನಿದ್ರಿಸುತ್ತಿದ್ದೀರಾ?: ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Update: 2024-05-27 07:15 GMT

PC : NDTV 

ಅಹಮದಾಬಾದ್: ನಗರದಲ್ಲಿ ಎರಡು ಗೇಮಿಂಗ್ ಝೋನ್‌ಗಳು ಅಗತ್ಯ ಪರವಾನಿಗೆಗಳಿಲ್ಲದೆ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ಸೋಮವಾರ ರಾಜ್‌ಕೋಟ್ ಪುರಸಭೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಶನಿವಾರ ಒಂಬತ್ತು ಮಕ್ಕಳು ಸೇರಿದಂತೆ 28 ಜನರು ಬೆಂಕಿಗಾಹುತಿಯಾದ ಬಳಿಕ, ಈ ಬಗ್ಗೆ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.

ರಾಜ್‌ಕೋಟ್‌ನಲ್ಲಿ ಗೇಮಿಂಗ್ ಕೇಂದ್ರವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಮತ್ತು ಅಗ್ನಿ ಸುರಕ್ಷತೆಯ ಬಗ್ಗೆ ಅಗತ್ಯ ಪ್ರಮಾಣ ಪತ್ರಗಳು ಇರಲಿಲ್ಲ ಎಂದು ಸರ್ಕಾರದ ಪ್ರತಿನಿಧಿಗಳು ನ್ಯಾಯಾಲಯದ ಗಮನಕ್ಕೆ ತಂದ ಬಳಿಕ ಆಕ್ರೋಶಗೊಂಡ ನ್ಯಾಯಾಲಯ, “ನೀವು ಅಂಧರಾಗಿದ್ದೀರಾ? ನಾಲ್ಕು ವರ್ಷಗಳಿಂದ ನಿದ್ದೆ ಮಾಡುತ್ತಿದ್ದೀರಾ? ನಮಗೆ ಈಗ ಸ್ಥಳೀಯ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ," ಎಂದು ನ್ಯಾಯಾಲಯವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಪೌರ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳನ್ನು ಗುಜರಾತ್ ಸರ್ಕಾರ ಅಮಾನತುಗೊಳಿಸಿದೆ.

ರಾಜ್‌ಕೋಟ್‌ನ ನಾನಾ-ಮಾವಾ ಪ್ರದೇಶದ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ 28 ಜನರು ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News