ಹೊಸದಿಲ್ಲಿ| ಲೋಕಸಭಾ ಸ್ಪೀಕರ್ ಓಂ ಬಿರ್ಲಾರೊಂದಿಗೆ ಚರ್ಚೆ ನಡೆಸಿದ ಸ್ಪೀಕರ್ ಯು.ಟಿ. ಖಾದರ್
ಹೊಸದಿಲ್ಲಿ: ಪ್ರತೀ ವರ್ಷ ನಡೆಯುವ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನವನ್ನು 22 ವರ್ಷಗಳ ನಂತರ ಕರ್ನಾಟಕದಲ್ಲಿ ನಡೆಸುವ ಕುರಿತು ಸ್ಪೀಕರ್ ಯ.ಟಿ. ಖಾದರ್ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ರನ್ನು ಇಂದು ಭೇಟಿ ಮಾಡಿ ಅಭಿಲಾಷೆ ವ್ಯಕ್ತಪಡಿಸಿದರು.
ಯ.ಟಿ. ಖಾದರ್ ಅವರ ನಿಲುವನ್ನು ಲೋಕಸಭಾಧ್ಯಕ್ಷರು ಸಕರಾತ್ಮಕವಾಗಿ ಸ್ವೀಕರಿಸಿ, ಈ ಕುರಿತು ಸೆ.23 ಮತ್ತು 24 ರಂದು ದೆಹಲಿಯ ನೂತನ ಸಂಸತ್ ಭವನದಲ್ಲಿ ನಡೆಯಲಿರುವ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಯು.ಟಿ. ಖಾದರ್ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸದನವನ್ನು ಕ್ರಿಯಾತ್ಮಕವಾಗಿ ನಡೆಸಲು ಸದಸ್ಯರುಗಳು ಭಾಗವಹಿಸುವಂತೆ ಪ್ರೇರೇಪಿಸುವಲ್ಲಿ ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆಯೂ ಓಂ ಬಿರ್ಲಾ ಅವರ ಗಮನಕ್ಕೆ ತಂದಿರುತ್ತಾರೆ.
ಅವುಗಳಲ್ಲಿ ಪ್ರಮುಖವಾದವುಗಳು:-
▪️ಸದನವನ್ನು ಈ ಹಿಂದೆ ಸಾಧಾರಣವಾಗಿ ಬೆಳಗ್ಗೆ 11 ಗಂಟೆಗೆ ಪ್ರಾರಂಭಿಸಲಾಗುತ್ತಿತ್ತು, ಆದರೆ ಕಾರ್ಯಕಲಾಪಗಳು ಹೆಚ್ಚು ಸಮಯ ನಡೆಯುವಂತಾಗಲು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಿಸಲು ತೀರ್ಮಾನ.
▪️ಸದನವನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಅನುಕೂಲವಾಗುವಂತೆ ಕೊರಂ ಗೆ ಸಹಕರಿಸುವಂತಹ ಪ್ರಥಮ 23 ಸದಸ್ಯರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲು ತಿರ್ಮಾನ.
▪️ಈ ನಿಟ್ಟಿನಲ್ಲಿ ಸದಸ್ಯರುಗಳಿಗೆ ವಿಧಾನ ಸಭಾಂಗಣದ ಮೊಗಸಾಲೆಯಲ್ಲಿಯೇ ಅತ್ಯುತ್ತಮವಾದ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಬೋಜನದ ವ್ಯವಸ್ಥೆ.
▪️ಸದನದಲ್ಲಿ ಸದಸ್ಯರು ಒಟ್ಟಾರೆಯಾಗಿ ಕಲಾಪದ ಸಮಯದಲ್ಲಿ ಕಳೆದ ಸಮಯವನ್ನು ಗುರುತಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಳಕೆಯಿಂದ ಮಾಹಿತಿ ಉಪಲಬ್ಧ ಮಾಡುವುದು.
▪️ಸದನದಲ್ಲಿ ಎಲ್ಲಾ ಸದಸ್ಯರುಗಳು ಗಮನಿಸುವಂತಹ ಅತ್ಯುತ್ತಮ ಗುಣಮಟ್ಟದ ಲೋಹದಲ್ಲಿ ಸಂವಿಧಾನ ಪೀಠಿಕೆಯನ್ನು ವಿಧಾನ ಸಭೆಯ ಸಭಾಂಗಣದಲ್ಲಿ ಅಳವಡಿಕೆ.
▪️ಶಾಸಕರುಗಳ ಬಹುದಿನಗಳ ಬೇಡಿಕೆಯಾದ ಹೊಸದಿಲ್ಲಿಯ ಸಂಸತ್ತಿನ ಸದಸ್ಯರುಗಳ ಅನುಕೂಲಕ್ಕಾಗಿರುವಂತಹ ಕಾನ್ಸ್ಟಿಟ್ಯುಎನ್ಸಿ ಕ್ಲಬ್ ಮಾದರಿಯಲ್ಲಿ ಕರ್ನಾಟದಲ್ಲೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕರ್ನಾಟಕ ವಿಧಾನ ಮಂಡಲ ಸಂಸ್ಥೆಯನ್ನು ಬೆಂಗಳೂರಿನ ಬಾಲಬ್ರೂಹಿ ಕಟ್ಟಡದಲ್ಲಿ ಫೆ.12, 2024ರಲ್ಲಿ ಉದ್ಘಾಟಿಸುವ ಮೂಲಕ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ.