ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ಆಲಿಕೆಗೆ ವಿಶೇಷ ಪೀಠ ರಚನೆ: ಕೇರಳ ಹೈಕೋರ್ಟ್

Update: 2024-09-05 16:27 GMT

ಕೇರಳ ಹೈಕೋರ್ಟ್ |  PC : PTI 

ಕೊಚ್ಚಿ: ಜಸ್ಟಿಸ್ ಹೇಮಾ ಸಮಿತಿ ವರದಿಗೆ ಸಂಬಂಧಿಸಿ ಪ್ರಕರಣಗಳ ಆಲಿಕೆಗೆ ಐವರು ಸದಸ್ಯರ ವಿಶೇಷ ಪೀಠವನ್ನು ರೂಪಿಸಲಾಗುವುದು ಎಂದು ಕೇರಳ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ.

ಸಮಿತಿಯ ವರದಿಯ ಬಿಡುಗಡೆಗೆ ಅವಕಾಶ ನೀಡಿದ ಏಕಸದಸ್ಯ ಪೀಠದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಹಾಗೂ ನ್ಯಾಯಮೂರ್ತಿ ಎಸ್. ಮನು ಅವರನ್ನು ಒಳಗೊಂಡ ಪೀಠ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವಿಶೇಷ ಪೀಠ ಮಹಿಳಾ ನ್ಯಾಯಾಧೀಶರನ್ನು ಕೂಡ ಒಳಗೊಂಡಿರಲಿದೆ ಎಂದು ಉಚ್ಚ ನ್ಯಾಯಾಲಯ ತನ್ನ ಮೌಖಿಕ ಅಭಿಪ್ರಾಯದಲ್ಲಿ ತಿಳಿಸಿದೆ ಎಂದು ದೂರುದಾರರ ಪರ ವಕೀಲರು ತಿಳಿಸಿದ್ದಾರೆ.

ಜಸ್ಟಿಸ್ ಹೇಮಾ ಸಮಿತಿಯಿ ವರದಿ ಹಾಗೂ ಶಿಫಾರಸುಗಳನ್ನು ಬಹಿರಂಗಪಡಿಸಲು ಅನುಮತಿ ನೀಡಿ ರಾಜ್ಯ ಮಾಹಿತಿ ಆಯೋಗ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಏಕ ಸದಸ್ಯ ಪೀಠ ಆಗಸ್ಟ್ 13ರಂದು ವರದಿ ಬಿಡುಗಡೆಗೆ ಅನುಮತಿ ನೀಡಿತ್ತು.

ವರದಿಯ ಮಾಹಿತಿಯನ್ನು ಸಮಂಜಸವಾಗಿ ಪ್ರಸಾರ ಮಾಡಲು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಎಸ್‌ಪಿಐಒ)ಗೆ ನಿರ್ದೇಶಿಸಿದ ಮಾಹಿತಿ ಆಯೋಗದ ಜುಲೈ 5ರ ಆದೇಶವನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕ ಸಜಿಮೋನ್ ಪರಯಿಲ್ ಅವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭ ಏಕ ಸದಸ್ಯ ಪೀಠ ಈ ಆದೇಶ ನೀಡಿತ್ತು.

ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಪರಯಿಲ್ ಸಲ್ಲಿಸಿದ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆ ನಡೆಯಿತು. ಈ ಸಂದರ್ಭ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠವನ್ನು ರೂಪಿಸಲು ನಿರ್ಧರಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News