ವಿಶೇಷ ಸಂಸತ್ ಅಧಿವೇಶನ: ಸೆ.17ರಂದು ಸರ್ವಪಕ್ಷ ಸಭೆ

Update: 2023-09-13 16:48 GMT

Photo: PTI 

ಹೊಸದಿಲ್ಲಿ: ಸಂಸತ್ತಿನ ವಿಶೇಷ ಅಧಿವೇಶನ ಆರಂಭದ ಮುನ್ನಾ ದಿನ (ಸೆ.17ರಂದು) ಸರ್ವಪಕ್ಷಗಳ ಸದನ ನಾಯಕರ ಸಭೆಯನ್ನು ಕರೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಬುಧವಾರ ತಿಳಿಸಿದ್ದಾರೆ.

ಸಂಬಂಧಿಸಿದ ನಾಯಕರಿಗೆ ಇ-ಮೇಲ್ ಮೂಲಕ ಸರ್ವಪಕ್ಷ ಸಭೆಯ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಅವರು X ನಲ್ಲಿಯ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಸೆ.18ರಿಂದ ಐದು ದಿನಗಳ ವಿಶೇಷ ಅಧಿವೇಶನ ನಡೆಯಲಿದೆ ಎಂದು ಆ.31ರಂದು ಪ್ರಕಟಿಸಿದ್ದ ಜೋಶಿ, ಅದಕ್ಕಾಗಿ ಯಾವುದೇ ಅಜೆಂಡಾವನ್ನು ತಿಳಿಸಿರಲಿಲ್ಲ. ಅಮೃತ ಕಾಲದ ನಡುವೆ ಸಂಸತ್ತಿನಲ್ಲಿ ಫಲದಾಯಕ ಚರ್ಚೆಗಳನ್ನು ಎದುರು ನೋಡುತ್ತಿದ್ದೇವೆ ಎಂದಷ್ಟೇ ಅವರು X ನಲ್ಲಿ ತಿಳಿಸಿದ್ದರು.

ವಿಶೇಷ ಅಧಿವೇಶನವನ್ನು ಕರೆಯುವ ತನ್ನ ಉದ್ದೇಶದ ಕುರಿತು ಯಾವುದೇ ಮಾಹಿತಿಯನ್ನು ಕೇಂದ್ರವು ಈವರೆಗೆ ಬಹಿರಂಗಗೊಳಿಸಿಲ್ಲ. ಹೀಗಾಗಿ ಅಧಿವೇಶನ ಯಾವುದರ ಕುರಿತಾಗಿರಬಹುದು ಎಂಬ ಕುರಿತು ವದಂತಿಗಳು ಸೃಷ್ಟಿಯಾಗಿವೆ.

ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎಂಬ ಊಹಾಪೋಹಕ್ಕೊಳಗಾಗಿರುವ ವಿವಿಧ ಮಸೂದೆಗಳಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಯನ್ನು ಪರಿಚಯಿಸುವ ಮತ್ತು ಮಹಿಳಾ ಮೀಸಲಾತಿ ಮಸೂದೆಗಳು ಸೇರಿವೆ.

ಈ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಕಲಾಪಗಳು ನೂತನ ಸಂಸತ್ ಭವನಕ್ಕೆ ಸ್ಥಳಾಂತರಗೊಳ್ಳಲಿವೆ ಎಂದೂ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News