ಮುಳುಗಿದ ವಾಣಿಜ್ಯ ಹಡಗು | ತಟ ರಕ್ಷಣಾ ಪಡೆಯಿಂದ 12 ಸಿಬ್ಬಂದಿ ರಕ್ಷಣೆ

Update: 2024-12-05 20:08 IST
Photo of IndiaCoastGuard

PC: X\ @IndiaCoastGuard

  • whatsapp icon

ಹೊಸದಿಲ್ಲಿ : ಗುಜರಾತ್‌ನ ಪೋರಬಂದರ್‌ನಿಂದ ಇರಾನ್‌ನ ಬಂದರ್ ಅಬ್ಬಾಸ್ ಬಂದರಿಗೆ ಪ್ರಯಾಣಿಸುತ್ತಿದ್ದ ವಾಣಿಜ್ಯ ಹಡಗೊಂದು ಬುಧವಾರ ಉತ್ತರ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, ಅದರ 12 ಸಿಬ್ಬಂದಿಯನ್ನು ಭಾರತೀಯ ತಟ ರಕ್ಷಣಾ ಪಡೆಯು ರಕ್ಷಿಸಿದೆ.

‘ಎಮ್‌ಎಸ್‌ವಿ ಅಲ್ ಪಿರಾಂಪಿರ್’ ಹಡಗು ಭಾರತೀಯ ಜಲಪ್ರದೇಶದ ಹೊರಗೆ, ಪಾಕಿಸ್ತಾನದ ಶೋಧ ಮತ್ತು ರಕ್ಷಣಾ ವಲಯದ ವ್ಯಾಪ್ತಿಯಲ್ಲಿ ಮುಳುಗಿದ ಹಿನ್ನೆಲೆಯಲ್ಲಿ, ಭಾರತೀಯ ತಟ ರಕ್ಷಣಾ ಪಡೆಯು ಪಾಕಿಸ್ತಾನದ ಸಾಗರ ತೀರ ಭದ್ರತಾ ಪಡೆ ಪಿಎಮ್‌ಎಸ್‌ಎ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿತು.

‘‘ಈ ಮಾನವೀಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ತಟ ರಕ್ಷಣಾ ಪಡೆಯು ಪಿಎಮ್‌ಎಸ್‌ಎಯ ನಿಕಟ ಸಹಯೋಗದೊಂದಿಗೆ ನಡೆಸಿತು. ಕಾರ್ಯಾಚರಣೆಯುದ್ದಕ್ಕೂ ಉಭಯ ದೇಶಗಳ ಸಾಗರ ತೀರ ರಕ್ಷಣಾ ಸಮನ್ವಯ ಕೇಂದ್ರಗಳು ನಿರಂತರ ಸಂಪರ್ಕದಲ್ಲಿದ್ದವು’’ ಎಂದು ಭಾರತೀಯ ತಟ ರಕ್ಷಣಾ ಪಡೆಯ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

ಪ್ರಕ್ಷುಬ್ಧ ಸಮುದ್ರ ಮತ್ತು ಪ್ರವಾಹದಿಂದಾಗಿ ಹಡಗು ಬುಧವಾರ ಮುಂಜಾನೆ ಮುಳುಗಿತು ಎನ್ನಲಾಗಿದೆ. ಭಾರತೀಯ ತಟ ರಕ್ಷಣಾ ಪಡೆಯ ಮುಂಬೈಯಲ್ಲಿರುವ ಸಾಗರತೀರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ತುರ್ತು ಅಪಾಯದ ಸಂದೇಶ ತಲುಪಿತು. ಅದು ಗಾಂಧಿನಗರದಲ್ಲಿರುವ ಪಡೆಯ ವಾಯುವ್ಯ ಪ್ರಾದೇಶಿಕ ಪ್ರಧಾನಕಚೇರಿಗೆ ಮಾಹಿತಿ ರವಾನಿಸಿತು.

ತಟರಕ್ಷಣಾ ಪಡೆಯು ತನ್ನ ‘ಸಾರ್ಥಕ್’ ಹಡಗನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿತು. ಅದೇ ಸಮಯದಲ್ಲಿ, ಪಾಕಿಸ್ತಾನದ ಸಾಗರತೀರ ರಕ್ಷಣಾ ಸಮನ್ವಯ ಕೇಂದ್ರಕ್ಕೂ ಮಾಹಿತಿ ನೀಡಲಾಯಿತು. ಪಾಕಿಸ್ತಾನದ ಸಾಗರತೀರ ರಕ್ಷಣಾ ಸಮನ್ವಯ ಕೇಂದ್ರವೂ ಕ್ಷಿಪ್ರವಾಗಿ ಪ್ರತಿಕ್ರಿಯಿಸಿತು ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಸಂಕಷ್ಟ ಕರೆ ಹೊರಟ ಸ್ಥಳಕ್ಕೆ ಸಾರ್ಥಕ್ ಹಡಗು ತಲುಪಿದ ಬಳಿಕ, ವ್ಯಾಪಕ ಶೋಧ ಕಾರ್ಯ ನಡೆಸಲಾಯಿತು. ಮುಳುಗಿದ ಹಡಗಿನಲ್ಲಿದ್ದ 12 ಸಿಬ್ಬಂದಿ ಸಣ್ಣ ದೋಣಿಯೊಂದರಲ್ಲಿ ಇರುವುದು ಪತ್ತೆಯಾಯಿತು. ಅವರನ್ನು ದ್ವಾರಕೆಯಿಂದ ಪಶ್ಚಿಮಕ್ಕೆ 270 ಕಿ.ಮೀ. ದೂರದ ಸಮುದ್ರದಲ್ಲಿ ರಕ್ಷಿಸಲಾಯಿತು.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಒಂದು ಪಿಎಮ್‌ಎಸ್‌ಎ ವಿಮಾನ ಮತ್ತು ವಾಣಿಜ್ಯ ಹಡಗು ಎಮ್.ವಿ. ಕೋಸ್ಕೊ ಕೂಡ ಬೆಂಬಲ ನೀಡಿದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News