ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಭಟ್ ಇಂದು ನಿವೃತ್ತಿ; ಸಾಂಪ್ರದಾಯಿಕ ಬೀಳ್ಕೊಡುಗೆ ಇಲ್ಲ
ಹೊಸದಿಲ್ಲಿ: ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಆದರೆ ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಅಕ್ಟೋಬರ್ 18ರಂದು ಸಂಜೆ ಅಧಿಕೃತ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿವುದರಿಂದ ಭಟ್ ಅವರ ಜತೆ ಸೇವೆಯ ಕೊನೆಯ ದಿನ ಒಂದೇ ಪೀಠದಲ್ಲಿ ಕಾರ್ಯನಿರ್ವಹಿಸುವ ಸಾಂಪ್ರದಾಯಿಕ ಬೀಳ್ಕೊಡುಗೆಗೆ ಅವಕಾಶ ತಪ್ಪಿಹೋಗಿದೆ.
ಅಕ್ಟೋಬರ್ 17ರಂದು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮತ್ತು ಅವರ ದತ್ತು ಸ್ವೀಕಾರದ ಹಕ್ಕನ್ನು ನಿರಾಕರಿಸಿದ ಸುಪ್ರೀಂಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿ ಭಟ್ ಅವರು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರ ಜತೆಗಿದ್ದರು. ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಈ ಹಕ್ಕುಗಳಿಗೆ ಅವಕಾಶ ನೀಡಲು ಒಲವು ವ್ಯಕ್ತಪಡಿಸಿದ್ದರು.
ಸಿಜೆಐ ಚಂದ್ರಚೂಡ್ ಸೇರಿದಂತೆ ಇಬ್ಬರು ನ್ಯಾಯಮೂರ್ತಿಗಳು ಬರೆದ ಎರಡು ಮುಖ್ಯ ತೀರ್ಪುಗಳಲ್ಲಿ ಸಲಿಂಗ ಕಾಮಕ್ಕೆ ಅವಕಾಶ ನೀಡಿದ್ದರೆ, ಭಟ್ ತಮ್ಮ ತೀರ್ಪಿನಲ್ಲಿ ಇದನ್ನು ನಿರಾಕರಿಸಿದ್ದರು ಹಾಗೂ ಇತರ ನ್ಯಾಯಮೂರ್ತಿಗಳ ತಾರ್ಕಿಕತೆಯನ್ನು ಟೀಕಿಸಿದ್ದರು.
ಭಾರತದ ಸುಪ್ರೀಂಕೋರ್ಟ್ 1950ರಲ್ಲಿ ಆರಂಭವಾದಾಗಿನಿಂದ ನಿವೃತ್ತರಾಗುವ ನ್ಯಾಯಮೂರ್ತಿಗಳು, ಔಪಚಾರಿಕ ಪೀಠದಲ್ಲಿ, ಸುಪ್ರೀಂಕೋರ್ಟ್ ನ ಅತಿದೊಡ್ಡ ಕೋರ್ಟ್ ರೂಂ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಜತೆ ಕಾರ್ಯನಿರ್ವಹಿಸುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ವಕೀಲರು, ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ವಕೀಲರ ಸಂಘದ ಮುಖ್ಯಸ್ಥರು, ನಿವೃತ್ತರಾಗಲಿರುವ ನ್ಯಾಯಮೂರ್ತಿಗಳ ಬಗ್ಗೆ ಬೀಳ್ಕೊಡುಗೆ ಭಾಷಣ ಮಾಡಲು ಅವಕಾಶವಿತ್ತು. ಬಳಿಕ ಸಿಜೆಐ ಬೀಳ್ಕೊಡುಗೆ ಶುಭ ಹಾರೈಸುತ್ತಿದ್ದರು.
ಈ ಬಾರಿ ಸಿಜೆಐ ಅನುಪಸ್ಥಿತಿಯಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಸಂಜಯ್ ಕೌಲ್ ಅವರು ಬೀಳ್ಕೊಡುಗೆ ಭಾಷಣ ಮಾಡಲಿದ್ದಾರೆ.