ನೂತನ ಕಾಯ್ದೆಯಡಿ ಸಿಇಸಿ, ಇಸಿಗಳ ನೇಮಕ ತಡೆಗೆ ಸುಪ್ರೀಂ ನಿರಾಕರಣೆ
ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ಅವರು ಇಲ್ಲದ ಸಮಿತಿಯಿಂದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕುರಿತ ನೂತನ ಕಾಯ್ದೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ನೂತನ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದೆ.
ಸರಕಾರೇತರ ಸಂಸ್ಥೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. ಅಲ್ಲದೆ, ಈ ವಿಷಯದ ಕುರಿತ ಬಾಕಿ ಅರ್ಜಿಗಳೊಂದಿಗೆ ಈ ಅರ್ಜಿಯ ವಿಚಾರಣೆಯನ್ನು ಎಪ್ರಿಲ್ ಗೆ ಪಟ್ಟಿ ಮಾಡಿದೆ.
ಈ ಅರ್ಜಿಯು ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತ (ನಿಯೋಜನೆ, ಸೇವಾ ಷರತ್ತು ಹಾಗೂ ಅಧಿಕಾರಾವಧಿ)ರ ಕಾಯ್ದೆ, 2023ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ನೂತನ ಕಾನೂನು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠದ ತೀರ್ಪಿಗೆ ವ್ಯತಿರಿಕ್ತವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇರಬೇಕು ಎಂದು ಪೀಠದ ತೀರ್ಪು ನಿರ್ದೇಶಿಸಿದೆ ಎಂದರು.
ಇದಕ್ಕೆ ಪೀಠ, ‘‘ಕ್ಷಮಿಸಿ ನಾವು ಈ ವಿಷಯದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ. ಸಾಂವಿಧಾನಿಕ ಸಿಂಧುತ್ವದ ವಿಷಯ ಎಂದಿಗೂ ನಿರುಪಯುಕ್ತವಾಗುವುದಿಲ್ಲ. ಮಧ್ಯಂತರ ಪರಿಹಾರ ನೀಡಲು ನಮ್ಮ ಮಾನದಂಡಗಳು ನಮಗೆ ತಿಳಿದಿದೆ’’ ಎಂದು ಭೂಷಣ್ ಅವರಿಗೆ ತಿಳಿಸಿದೆ.
ನೂತನ ಕಾಯ್ದೆಯ ಪ್ರಕಾರ ಪ್ರಧಾನಿ (ಅಧ್ಯಕ್ಷರು), ಲೋಕಸಭೆಯ ಪ್ರತಿಪಕ್ಷದ ನಾಯಕ (ಸದಸ್ಯ), ಪ್ರಧಾನಿ ಅವರಿಂದ ನಾಮನಿರ್ದೇಶಿತಗೊಂಡ ಕೇಂದ್ರ ಸಂಪುಟ ಸಚಿವ (ಸದಸ್ಯ)ರನ್ನು ಒಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ರಾಷ್ಟ್ರಪತಿ ಅವರು ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ.