ಅಮಿತ್ ಶಾ ಅವರ ತಿರುಚಿದ ವೀಡಿಯೋ ಪ್ರಕರಣ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ದಿಲ್ಲಿ ಪೊಲೀಸರ ಸಮನ್ಸ್
ಹೊಸದಿಲ್ಲಿ: ಮೀಸಲಾತಿ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಕುರಿತಂತೆ ತಿರುಚಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರಿಗೆ ಸಮನ್ಸ್ ನೀಡಿ ಬುಧವಾರ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣ ಕುರಿತಂತೆ ತೆಲಂಗಾಣದ ಇತರ ನಾಲ್ಕು ಮಂದಿಗೂ ನೋಟಿಸ್ ಜಾರಿಯಾಗಿದ್ದು ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ವೈರಲ್ ಆದ ವೀಡಿಯೋವನ್ನು ತೆಲಂಗಾಣ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಿತ್ತು. ನಂತರ ಅದನ್ನು ಹಲವು ಪಕ್ಷ ನಾಯಕರು ಪೋಸ್ಟ್ ಮಾಡಿ, ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಯನ್ನು ಕೈಬಿಡುವ ಉದ್ದೇಶ ಬಿಜೆಪಿಗಿದೆ ಎಂದು ಬರೆದಿದ್ದರು.
ಕೇಂದ್ರ ಗೃಹ ಸಚಿವಾಲಯ ನೀಡಿದ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಈ ವೀಡಿಯೋವನ್ನು ಅಪ್‌ಲೋಡ್ ಮಾಡಿದ ಮತ್ತು ಹಂಚಿಕೊಂಡ ಖಾತೆಗಳ ಕುರಿತು ಮಾಹಿತಿ ಕೋರಿ ಎಕ್ಸ್ ಮತ್ತು ಫೇಸ್ಬುಕ್‌ಗೂ ನೋಟಿಸ್ ಜಾರಿಗೊಳಿಸಿದ್ದಾರೆ.