‘ಚಂದ್ರಯಾನ 3’ನ್ನು ಹೊತ್ತ ರಾಕೆಟಿನ ಮೇಲ್ಭಾಗ ಶಾಂತ ಸಾಗರದಲ್ಲಿ ಪತನ
Update: 2023-11-16 16:03 GMT
ಬೆಂಗಳೂರು : ‘ಚಂದ್ರಯಾನ 3’ ಗಗನ ನೌಕೆಯನ್ನು ಹೊತ್ತ ಕ್ರಯೋಜನಿಕ್ ರಾಕೆಟಿನ ಮೇಲಿನ ಭಾಗವು ಭೂಮಿಯ ವಾತಾವರಣಕ್ಕೆ ಬುಧವಾರ ಅನಿಯಂತ್ರಿತ ಮರುಪ್ರವೇಶ ಮಾಡಿದ್ದು, ಉತ್ತರ ಶಾಂತ ಸಾಗರದಲ್ಲಿ ಪತನಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
‘‘ಎಲ್ವಿಎಮ್3 ಎಮ್4 ಉಡಾವಣಾ ವಾಹಕದ ಕ್ರಯೋಜೆನಿಕ್ ಮೇಲ್ಭಾಗವು ಬುಧವಾರ ಮಧ್ಯಾಹ್ನ ಸುಮಾರು 2:42ಕ್ಕೆ ಭೂಮಿಯ ವಾತಾವರಣಕ್ಕೆ ಅನಿಯಂತ್ರಿತ ಮರುಪ್ರವೇಶ ಮಾಡಿದೆ’’ ಎಂದು ಇಸ್ರೊ ಹೆಳಿಕೆಯೊಂದರಲಿ ತಿಳಿಸಿದೆ.
ಚಂದ್ರಯಾನ 3 ಗಗನನೌಕೆಯು ಜು.14ರಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತ್ತು. ಒಂದು ತಿಂಗಳ ಯಾನದ ಬಳಿಕ, ಆ.23ರಂದು ಅದರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ನೆಲಸ್ಪರ್ಶ ಮಾಡಿತ್ತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದ ಸಮೀಪ ನೆಲಸ್ಪರ್ಶ ಮಾಡಿದ ಮೊದಲ ದೇಶವಾಗಿ ಭಾರತ ಇತಿಹಾಸ ನಿರ್ಮಿಸಿದೆ.
ಚಂದ್ರನ ನೆಲದಲ್ಲಿ 10 ದಿನಗಳ ಕಾಲ ಓಡಾಡಿದ ಬಳಿಕ ಲ್ಯಾಂಡರ್ ಮತ್ತು ಅದರ ಪ್ರಜ್ಞಾನ ರೋವರ್ ನಿದ್ರೆಗೆ ಜಾರಿತ್ತು. ಲ್ಯಾಂಡರ್ ಮತತು ರೋವರನ್ನು ಹೊತ್ತುಕೊಂಡು ಹೋಗಿರುವ ಆರ್ಬಿಟರ್ ಈಗಲೂ ಚಂದ್ರನಿಗೆ ಸುತ್ತು ಬರುತ್ತಿದೆ.
ಕೆಳಮಟ್ಟದಲ್ಲಿ ಭೂಮಿಯ ಸುತ್ತ ತಿರುಗುವ ವಸ್ತುಗಳಿಗೆ ಸಂಬಂಧಿಸಿ ಬಾಹ್ಯಾಕಾಶ ಪಳೆಯುಳಿಕೆ ಸಮನ್ವಯ ಸಮಿತಿ ಮಾಡಿರುವ ಶಿಫಾರಸಿನಂತೆ, ಉಡಾವಣೆಗೊಂಡ 124 ದಿನಗಳಲ್ಲಿ ರಾಕೆಟಿನ ಉಳಿದ ಭಾಗವು ಭೂಮಿಗೆ ಮರಳಿದೆ ಎಂದು ಇಸ್ರೊ ಹೇಳಿದೆ.