ಪೂಂಛ್ ನಲ್ಲಿ ಸೇನೆಯ ಕಸ್ಟಡಿಯಲ್ಲಿದ್ದ ಮೂವರು ನಾಗರಿಕರು ಮೃತ್ಯು: ಪೋಲಿಸರಿಂದ ಪ್ರಕರಣ ದಾಖಲು
ಶ್ರೀನಗರ: ಜಮ್ಮು-ಕಾಶ್ಮೀರ ಪೋಲಿಸರು ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಮೂವರು ನಾಗರಿಕರ ಸಾವುಗಳಿಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ರವಿವಾರ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಡಿ.21ರಂದು ಪೂಂಛ್ ಜಿಲ್ಲೆಯ ಸುರಾನಕೋಟ್ ಪ್ರದೇಶದಲ್ಲಿ ಸೇನಾವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ್ದ ಹೊಂಚುದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟ ಮರುದಿನ ಸಫೀರ್ ಹುಸೇನ್ (43), ಮುಹಮ್ಮದ್ ಶೌಕತ್ (27) ಮತ್ತು ಶಬೀರ್ ಅಹ್ಮದ್ (32) ಅವರ ಮೃತದೇಹಗಳು ಪತ್ತೆಯಾಗಿದ್ದವು. ಪೂಂಛ್ ದಾಳಿ ಕುರಿತು ವಿಚಾರಣೆಗಾಗಿ ಸೇನೆಯು ವಶಕ್ಕೆ ತೆಗೆದುಕೊಂಡಿದ್ದ ಎಂಟು ಜನರಲ್ಲಿ ಈ ಮೂವರು ಸೇರಿದ್ದರು.
ಈ ನಡುವೆ ರವಿವಾರ ಸೇನೆಯು ಹೊಂಚು ದಾಳಿಯಲ್ಲಿ ಮೃತ ಯೋಧರನ್ನು ನಾಯ್ಕ್ ಬೀರೇಂದರ್ ಸಿಂಗ್, ನಾಯ್ಕ್ ಕರಣಕುಮಾರ್, ರೈಫಲ್ಮನ್ ಗಳಾದ ಗೌತಮ್ ಕುಮಾರ್ ಮತ್ತು ಚಂದನ್ ಕುಮಾರ್ ಎಂದು ಹೆಸರಿಸಿದೆ.
ಯೋಧರು ಮೂವರು ನಾಗರಿಕರನ್ನು ವಿವಸ್ತ್ರಗೊಳಿಸುವ ಮತ್ತು ಅವರ ಮೇಲೆ ಕೆಂಪು ಮೆಣಸಿನ ಹುಡಿಯನ್ನು ಚಿಮುಕಿಸುತ್ತಿರುವ 29 ಸೆಕೆಂಡ್ಗಳ ವೀಡಿಯೊ ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆದ ಬಳಿಕ ಅವರ ಸಾವುಗಳು ಮತ್ತು ಇತರ ಐವರು ಗಾಯಗೊಂಡಿದ್ದಕ್ಕೆ ಸಂಬಂಧಿಸಿದಂತೆ ಸುರಾನಕೋಟ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂವರು ನಾಗರಿಕರ ಸಾವುಗಳಿಗೆ ಕಾರಣವಾದ ಸಂದರ್ಭಗಳ ಕುರಿತು ಸೇನೆಯೂ ವಿಚಾರಣೆಗೆ ಆದೇಶಿಸಿದೆ.