ʼಶೇ. 97ರಷ್ಟು ಆರೋಪಿಗಳು ಖುಲಾಸೆʼ: ಯುಎಪಿಎ ಕಾಯ್ದೆಯನ್ನು ರದ್ದುಗೊಳಿಸಿ ಎಂದ ಪ್ರೊ. ಹರಗೋಪಾಲ್
ಹೈದರಾಬಾದ್: “ಪ್ರಾಸಿಕ್ಯೂಷನ್ ಆರೋಪಿಯ ದೋಷವನ್ನು ಸಾಬೀತು ಮಾಡಲು ವಿಫಲವಾದರೂ, ಆರೋಪಿಯು ಮೂರರಿಂದ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದು, ನಂತರ ಖುಲಾಸೆಯಾಗುತ್ತಿದ್ದಾನೆ. ಸದ್ಯ ಹಲವಾರು ಪ್ರಕರಣಗಳಲ್ಲಿ ಹೀಗೆಯೇ ಆಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ, 1967ರ ಅಡಿ ಬಂಧನಕ್ಕೊಳಗಾಗಿರುವ ಶೇ. 97ರಷ್ಟು ಆರೋಪಿಗಳನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿದೆ” ಎಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜಿ. ಹರಗೋಪಾಲ್ ಹೇಳಿದ್ದಾರೆ ಎಂದು thehindu.com ವರದಿ ಮಾಡಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವಾರು ಮಂದಿಯನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಬಂಧಿಸಿ, ಜೈಲಿನಲ್ಲಿಡಲಾಯಿತು. ಶೇ. 97ರಷ್ಟು ಯುಎಪಿಎ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಹಲವಾರು ವರ್ಷಗಳೇ ಕಳೆದರೂ ವಿಚಾರಣೆ ಪ್ರಾರಂಭಗೊಳ್ಳುವುದಿಲ್ಲ. ಯುಎಪಿಎ ಕಾಯ್ದೆಯಡಿ, ಯಾವುದೇ ವ್ಯಕ್ತಿಯನ್ನು ಸಾಕ್ಷ್ಯಾಧಾರವಿಲ್ಲದಿದ್ದರೂ ಬಂಧಿಸಬಹುದಾಗಿದ್ದು, ಇದು ಪ್ರಜಾತಂತ್ರಕ್ಕೆ ವಿರುದ್ಧವಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಯುಎಪಿಎ ಕಾಯ್ದೆಯಡಿ ಬಂಧಿತರಾಗಿರುವ ಶೇ. 97ರಷ್ಟು ಮಂದಿ ಮುಗ್ಧರು ಎಂಬುದು ಇದರಿಂದ ಸಾಬೀತಾಗುತ್ತದೆ. ಹಾಗಾದರೆ, ತಮ್ಮ ಸಮಯವನ್ನು ಜೈಲಿನಲ್ಲಿ ಕಳೆದ ಆರೋಪಿಗಳ ಪಾಡೇನು?” ಎಂದು ಅವರು ಪ್ರಶ್ನಿಸಿದ್ದಾರೆ.
ಟಾಡಾ ಕಾಯ್ದೆ, 1987 ಹಾಗೂ ಪೋಟಾ ಕಾಯ್ದೆ, 2022 ಕೂಡಾ ರದ್ದಾಗಬೇಕು ಎಂದು ಪ್ರೊ. ಹರಗೋಪಾಲ್ ಆಗ್ರಹಿಸಿದರು.
ಒಂದು ಕಾಲದಲ್ಲಿ ಯುಎಪಿಎ ಕಾಯ್ದೆಯಡಿ ಬಂಧನಕ್ಕೀಡಾಗಿದ್ದ ಪ್ರೊ. ಹರಗೋಪಾಲ್ ಅವರು, “ಕಾನೂನುಗಳು ಪ್ರಜಾಸತ್ತಾತ್ಮಕ ಹಾಗೂ ನಾಗರಿಕವಾಗಿರಬೇಕೇ ಹೊರತು ದಮನಕಾರಿಯಾಗಿರಬಾರದು. ಇದಕ್ಕೂ ಮುನ್ನ, ಸರ್ಕಾರವನ್ನು ಟೀಕಿಸುವ ಪ್ರಕ್ರಿಯೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ದೇಶದ ಕುರಿತು ಪ್ರತಿಕ್ರಿಯಿಸಿದರೂ ಕೂಡಾ ದೇಶ ದ್ರೋಹ ಎಂದು ಪರಿಗಣಿಸಲಾಗುತ್ತಿದೆ” ಎಂದು ವಿಷಾದಿಸಿದ್ದಾರೆ.
“ಪ್ರಭುತ್ವವು ಹೆಚ್ಚು ಹೆಚ್ಚು ದೌರ್ಜನ್ಯಕಾರಿ ಹಾಗೂ ದಮನಕಾರಿ ಕಾಯ್ದೆಗಳನ್ನು ಜಾರಿಗೊಳಿಸುವತ್ತ ವಾಲುತ್ತಿದೆ. ಕಾನೂನಿನ ನಿಯಮವು ಅಸ್ತಿತ್ವದಲ್ಲಿಲ್ಲ. ಕಾನೂನುಗಳ ಪ್ರಮಾಣೀಕರಣವನ್ನು ಉನ್ನತ ದರ್ಜೆಗೇರಿಸುವ ಕೆಲಸ ಆಗುತ್ತಿಲ್ಲ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
“ನಾವು ಟಾಡಾ ಹಾಗೂ ಪೋಟಾ ಕಾಯ್ದೆಯ ರದ್ದತಿಗಾಗಿ ಹೋರಾಡಿದೆವು. ಆದರೆ, ಯುಎಪಿಎ ಕಾಯ್ದೆ ಅವುಗಳಂತಲ್ಲ. ನಾವು ಯುಎಪಿಎ ಕಾಯ್ದೆಯನ್ನು ಹೇರದಂತೆ ತೆಲಂಗಾಣ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಸಮಾಜದಲ್ಲಿನ ಅಪರಾಧಗಳನ್ನು ನಿಯಂತ್ರಿಸಲು ಕೆಲವು ಕಾನೂನುಗಳ ಅಗತ್ಯವಿದೆಯಾದರೂ, ಅವು ಯುಎಪಿಎ ಕಾಯ್ದೆಯಂತಿರಬಾರದು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.