ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಡವಾಗಿ ಸ್ವೀಕರಿಸಿದ ಉದ್ಧವ್ ಠಾಕ್ರೆ

Update: 2024-01-21 16:40 GMT

ಉದ್ಧವ್ ಠಾಕ್ರೆ | Photo : PTI

ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶಿವಸೇನೆ (ಯುಬಿಟಿ) ಅಧ್ಯಕ್ಷ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನವನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿದೆ.

ಠಾಕ್ರೆ ಕುಟುಂಬವನ್ನು ನಡೆಸಿಕೊಂಡ ರೀತಿಯ ಬಗ್ಗೆ ಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಬಿಜೆಪಿ ನೇತೃತದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಹ್ವಾನ ಪತ್ರಿಕೆ ತ್ವರಿತವಾಗಿ ತಲುಪಲು ಸ್ಪೀಡ್ ಪೋಸ್ಟ್ ಬಳಸಲಾಗುತ್ತದೆ. ಅದನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯೆ ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಹೇಳಿದ್ದಾರೆ.

ಆದರೆ, ಸ್ಪೀಡ್ ಪೋಸ್ಟ್ ನಲ್ಲಿ ಆಹ್ವಾನ ಪತ್ರಿಕೆಯನ್ನು ರವಾನಿಸಿರುವ ಕುರಿತು ಟೀಕಿಸಿರುವ ರಾವತ್, ‘‘ನೀವು ರಾಮನನ್ನು ಪೂಜಿಸುತ್ತೀರಿ. ಆದರೆ, ರಾವಣನಂತೆ ವರ್ತಿಸುತ್ತೀರಿ. ರಾಮ ನಿಮ್ಮನ್ನು ಶಪಿಸದೇ ಇರಲಾರ. ಎಲ್ಲಾ ಚಿತ್ರ ತಾರೆಯರನ್ನು ಆಹ್ವಾನಿಸಲಾಗಿದೆ. ಆದರೆ, ರಾಮ ಮಂದಿರ ಹೋರಾಟಕ್ಕೆ ಕೈ ಜೋಡಿಸಿದ್ದ ಠಾಕ್ರೆ ಕುಟುಂಬಕ್ಕೆ ಅವಮಾನ ಉಂಟು ಮಾಡುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ’’ ಎಂದಿದ್ದಾರೆ.

ಉದ್ದವ್ ಠಾಕ್ರೆ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರದಿಂದ ನಾಸಿಕ್ ನಲ್ಲಿ ಇರಲಿದ್ದಾರೆ. ಅವರು ಅದೇ ದಿನ ಕಾಲಾರಾಮ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಗೋದಾವರಿ ನದಿ ದಂಡೆಯಲ್ಲಿ ಮಹಾ ಆರತಿ ನಡೆಸಲಿದ್ದಾರೆ. ಮಂಗಳವಾರ ನಾಸಿಕ್ ನಲ್ಲಿ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News