ನಿರುದ್ಯೋಗವೇ ಮೋದಿ ಗ್ಯಾರಂಟಿ : ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಸರಕಾರಿ ಹುದ್ದೆಗಳು ಖಾಲಿಯಿರುವ ಕುರಿತು ರವಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ರಧಾನಿ ಮೋದಿಯವರ ಗ್ಯಾರಂಟಿಯು ‘ನಿರುದ್ಯೋಗದ ಗ್ಯಾರಂಟಿ ’ ಯಾಗಿದೆ ಎಂದು ಆರೋಪಿಸಿದ್ದಾರೆ.
ʼಅಂಕಿ ಅಂಶಗಳಂತೆ ದೇಶದಲ್ಲಿ ಸುಮಾರು 30 ಲಕ್ಷ ಸರಕಾರಿ ಹುದ್ದೆಗಳು ಖಾಲಿಯಿವೆ. ನಮ್ಮ ಕೋಟ್ಯಂತರ ಯುವಜನರು ಉದ್ಯೋಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರಕಾರವು ಪ್ರಚಾರದ ಹೊರತು ಈ ಹುದ್ದೆಗಳನ್ನು ತುಂಬಲು ಏನನ್ನೂ ಮಾಡಿಲ್ಲ’ ಎಂದು ರವಿವಾರ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘ಎಂಟು ವರ್ಷಗಳಲ್ಲಿ 22 ಕೋಟಿ ಯುವಜನರು ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಕೇವಲ ಏಳು ಲಕ್ಷ ಯುವಜನರು ಉದ್ಯೋಗಗಳನ್ನು ಪಡೆದಿದ್ದಾರೆ ಎಂದು ಸರಕಾರವು 2022, ಜುಲೈನಲ್ಲಿ ಸಂಸತ್ತಿನಲ್ಲಿ ತಿಳಿಸಿತ್ತು. ಅಂದರೆ ಸುಮಾರು 21.93 ಕೋಟಿ ಅರ್ಹ ಯುವಜನರು ಈಗಲೂ ನಿರುದ್ಯೋಗಿಗಳಾಗಿದ್ದಾರೆ’ ಎಂದೂ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.