ಏನೋ ಪುಣ್ಯಕ್ಕೆ ನೀವು ಮಳೆನೀರಿಗೆ ದಂಡ ವಿಧಿಸಲಿಲ್ಲ ; ಪೋಲಿಸ್, ಎಂಸಿಡಿಗೆ ದಿಲ್ಲಿ ಹೈಕೋರ್ಟ್ ಛೀಮಾರಿ

Update: 2024-08-02 17:10 GMT
PC : PTI 

ಹೊಸದಿಲ್ಲಿ : ಇಲ್ಲಿಯ ಹಳೆಯ ರಾಜಿಂದರ್ ನಗರದಲ್ಲಿಯ ಕೋಚಿಂಗ್ ಸೆಂಟರ್‌ನ ಅಂತಸ್ತಿಗೆ ಮಳೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಸಿಬಿಐಗೆ ವರ್ಗಾಯಿಸಿದೆ.

ಪೋಲಿಸರನ್ನು ತೀವ್ರ ತರಾಟೆಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಾಧೀಶ ಮನಮೋಹನ ನೇತೃತ್ವದ ಪೀಠವು,ತನ್ನ ಕಾರನ್ನು ಅಲ್ಲಿ ಚಲಾಯಿಸಿದ್ದಕ್ಕೆ ಚಾಲಕನನ್ನು ಬಂಧಿಸಿದಂತೆ ಪುಣ್ಯಕ್ಕೆ ನೀವು ತಳ ಅಂತಸ್ತನ್ನು ಪ್ರವೇಶಿಸಿದ್ದಕ್ಕೆ ಮಳೆ ನೀರಿಗೆ ದಂಡ ವಿಧಿಸಲಿಲ್ಲ ಎಂದು ಕುಟುಕಿತು.

ಚಾಲಕ ಮನುಜ್ ಕಥುರಿಯಾ ಜು.27ರಂದು ಮಳೆನೀರು ತುಂಬಿದ್ದ ರಸ್ತೆಯಲ್ಲಿ ತನ್ನ ಎಸ್‌ಯುವಿ ಚಲಾಯಿಸಿ ನೀರು ಉಕ್ಕಿ ಹರಿಯುವಂತೆ ಮಾಡಿದ್ದ ಮತ್ತು ಕೋಚಿಂಗ್ ಸೆಂಟರ್‌ನ ತಳಅಂತಸ್ತಿಗೆ ನೀರು ನುಗ್ಗುವಂತೆ ಮಾಡಿದ್ದ ಎಂದು ಪೋಲಿಸರು ಆರೋಪಿಸಿದ್ದಾರೆ.

ಕ್ರಿಮಿನಲ್ ಪ್ರಕರಣದಲ್ಲಿ ಸಿಬಿಐ ತನಿಖೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಯೊರ್ವರನ್ನು ನೇಮಿಸುವಂತೆ ನ್ಯಾಯಾಲಯವು ಕೇಂದ್ರ ಜಾಗ್ರತ ಆಯೋಗಕ್ಕೆ ಸೂಚಿಸಿತು.

ಮೂವರು ಯುವ ಐಎಎಸ್ ಆಕಾಂಕ್ಷಿಗಳು ತಳಅಂತಸ್ತಿನಲ್ಲಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುರಿತು ಪೋಲಿಸ್ ಮತ್ತು ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ)ಗೆ ಛೀಮಾರಿ ಹಾಕಿದ ಪೀಠವು, ವಿದ್ಯಾರ್ಥಿಗಳಿಗೆ ನೀರಿನಿಂದ ಹೊರಕ್ಕೆ ಬರಲು ಏಕೆ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿತು. ಪ್ರದೇಶದಲ್ಲಿಯ ಮಳೆನೀರಿನ ಚರಂಡಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದನ್ನು ಆಯುಕ್ತರಿಗೆ ಏಕೆ ತಿಳಿಸಿರಲಿಲ್ಲ ಎಂದು ಅದು ಎಂಸಿಡಿ ಅಧಿಕಾರಿಗಳನ್ನು ಪ್ರಶ್ನಿಸಿತು.’

ಎಂಸಿಡಿ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಇದು ಸಾಮಾನ್ಯವಾಗಿಬಿಟ್ಟಿದೆ ಎಂದು ನ್ಯಾಯಾಲಯವು ಕಟುವಾಗಿ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News