Fact Check | ರಸ್ತೆ ಮಧ್ಯೆ ಟ್ರಕ್ ನಿಲ್ಲಿಸಿ ಚಾಲಕ ನಮಾಝ್ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸುಳ್ಳು ವರದಿ ಮಾಡಿದ ʼಝೀ ನ್ಯೂಸ್ʼ

Update: 2025-03-09 16:30 IST
Fact Check | ರಸ್ತೆ ಮಧ್ಯೆ ಟ್ರಕ್ ನಿಲ್ಲಿಸಿ ಚಾಲಕ ನಮಾಝ್ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸುಳ್ಳು ವರದಿ ಮಾಡಿದ ʼಝೀ ನ್ಯೂಸ್ʼ
  • whatsapp icon

ಹೊಸದಿಲ್ಲಿ: ಮಾ.4ರಂದು ಜಮ್ಮುಕಾಶ್ಮೀರದ ರಾಮಬನ್ ಪ್ರದೇಶದಲ್ಲಿ ಟ್ರಕ್ ಚಾಲಕನೋರ್ವ ತನ್ನ ವಾಹನದ ಮೇಲೆ ನಮಾಝ್ ಮಾಡುತ್ತಿದ್ದ ವೀಡಿಯೊವೊಂದನ್ನು ಝೀನ್ಯೂಸ್ ಪ್ರಸಾರ ಮಾಡಿತ್ತು. ಚಾಲಕನು ರಸ್ತೆಬದಿಯಲ್ಲಿ ವಾಹನವನ್ನು ನಿಲ್ಲಿಸುವ ಬದಲು ಮಧ್ಯದಲ್ಲಿ ನಿಲ್ಲಿಸಿ ನಮಾಝ್ ಮಾಡಿದ್ದು ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿತ್ತು ಮತ್ತು ಪ್ರಯಾಣಿಕರು ಅನಾನುಕೂಲತೆಗಳನ್ನು ಎದುರಿಸುವಂತಾಗಿತ್ತು ಎಂದು ವಾಹಿನಿಯು ಹೇಳಿಕೊಂಡಿತ್ತು.

ನಿರೂಪಕರು ವೀಡಿಯೊವನ್ನು ಪದೇ ಪದೇ ತೋರಿಸಿದ್ದರು ಮತ್ತು ಟ್ರಕ್ ಚಾಲಕನಿಂದಾಗಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಒತ್ತಿ ಹೇಳುತ್ತಲೇ ಇದ್ದರು. ಝೀನ್ಯೂಸ್ ವೀಡಿಯೊದ ಸತ್ಯಾಸತ್ಯತೆಯನ್ನು ತಾನು ಸ್ವತಃ ಪರಿಶೀಲಿಸಿಲ್ಲ ಎಂದು ಹೇಳಿಕೊಂಡಿತ್ತಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ತುಣುಕನ್ನು ವೀಕ್ಷಿಸಿದ್ದ ಪ್ರತಿಯೊಬ್ಬರೂ ಟ್ರಕ್ ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

Full View

ಫ್ಯಾಕ್ಟ್ ಚೆಕ್

ವೀಡಿಯೊ ತುಣುಕಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಮುಂದಾದ ಸತ್ಯಶೋಧಕ ವೆಬ್ ಸೈಟ್ altnews.in ಕೀ ವರ್ಡ್‌ಗಳನ್ನು ಬಳಸಿ ಜಾಲಾಡಿದಾಗ ಮಾ.2ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಹಲವಾರು ಸಂಬಂಧಿತ ವೀಡಿಯೊಗಳು ಕಂಡುಬಂದಿದ್ದವು. ಈ ಪೈಕಿ ಫೇಸ್‌ಬುಕ್ ಬಳಕೆದಾರ ಭಟ್ ಸಾಜದ್ ಶೇರ್ ಮಾಡಿಕೊಂಡಿದ್ದ ವೀಡಿಯೊ ಕೂಡ ಇದ್ದು,‘ರಮಝಾನ್ ತಿಂಗಳ ಮೊದಲ ದಿನದಂದು ರಾಮಬನ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಾಲಕನೋರ್ವ ತನ್ನ ವಾಹನದ ಮೇಲ್ಭಾಗದಲ್ಲಿ ನಮಾಝ್ ಮಾಡುತ್ತಿದ್ದಾನೆ ’ ಎಂಬ ಅಡಿಬರಹವನ್ನು ನೀಡಲಾಗಿತ್ತು.

ನ್ಯಾಷನಲ್ ಹೈವೇ ಅಪ್‌ಡೇಟ್ಸ್ ಎನ್‌ಎಚ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿಯೂ ಇಂತಹುದೇ ವೀಡಿಯೊ ಪೋಸ್ಟ್ ಮಾಡಲಾಗಿದ್ದು,‘ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಸಮಯದಲ್ಲಿ ವ್ಯಕ್ತಿ ಟ್ರಕ್‌ನ ಮೇಲ್ಭಾಗದಲ್ಲಿ ನಮಾಝ್ ಮಾಡುತ್ತಿದ್ದಾನೆ’ ಎಂಬ ಅಡಿಬರಹವನ್ನು ಅದು ಹೊಂದಿತ್ತು.

 

ಆಲ್ಟ್‌ನ್ಯೂಸ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಾಲಕ ನಮಾಜ್ ಮಾಡುತ್ತಿದ್ದ ಟ್ರಕ್‌ನ ಎದುರಿನ ರಸ್ತೆಯಲ್ಲೂ ಸಂಚಾರ ದಟ್ಟಣೆ ಇತ್ತು, ಹೀಗಾಗಿ ಚಾಲಕ ನಮಾಝ್ ಗಾಗಿ ಟ್ರಕ್ ನಿಲ್ಲಿಸಿದ್ದರಿಂದ ವಾಹನ ದಟ್ಟಣೆಯುಂಟಾಗಿರಲಿಲ್ಲ,ಸ್ವತಃ ಆತನೇ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಕೊಂಡಿದ್ದ ಎನ್ನುವುದು ಸ್ಪಷ್ಟವಾಗಿದೆ.

ವಾಸ್ತವದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ.27ರಿಂದ ಪ್ರತಿಕೂಲ ಹವಾಮಾನ ಮತ್ತು ಭೂಕುಸಿತಗಳಿಂದಾಗಿ ವಾಹನಗಳ ಸಂಚಾರಕ್ಕೆ ಹಲವಾರು ತೊಡಕುಗಳು ಉಂಟಾಗಿದ್ದವು. ಫೆ.28ರಂದು ರಾಮಬನ್‌ನಲ್ಲಿ ರಸ್ತೆಯ ಒಂದು ಭಾಗವು ಕುಸಿದಿತ್ತು. ದುರಸ್ತಿ ಕಾರ್ಯ ಮತ್ತು ಸಿಂಗಲ್ ಲೇನ್ ವ್ಯವಸ್ಥೆಗೊಳಿಸಿದ್ದರಿಂದ ಮಾ.1 ಮತ್ತು 3ರ ನಡುವೆ ಸಂಚಾರವನ್ನು ತಡೆಹಿಡಿಯಲಾಗಿತ್ತು ಮತ್ತು ಇದರಿಂದಾಗಿ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿತ್ತು ಎನ್ನುವುದನ್ನು ಜಮ್ಮುಕಾಶ್ಮೀರ ಸಂಚಾರ ಪೋಲಿಸ್‌ನ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದ್ದ ಹಲವಾರು ಅಪ್‌ಡೇಟ್‌ಗಳಿಂದ ಆಲ್ಟ್‌ನ್ಯೂಸ್ ಕಂಡುಕೊಂಡಿದೆ.

 

ಹಿಂದುಸ್ಥಾನ ಟೈಮ್ಸ್,ಎಎನ್‌ಐ ಮತ್ತು ಕೆಲವು ಸ್ಥಳೀಯ ಸುದ್ದಿಸಂಸ್ಥೆಗಳೂ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಚ್ಚಿದ್ದನ್ನು ವರದಿ ಮಾಡಿದ್ದವು. 

Full View

ಕೃಪೆ: altnews.in

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News