81.5 ಕೋಟಿ ಮಂದಿಯ ಆಧಾರ್ ಮಾಹಿತಿ ಮಾರಾಟಕ್ಕಿದೆ !
ಹೊಸದಿಲ್ಲಿ: ವೈಯಕ್ತಿಕವಾಗಿ ಗುರುತಿಸಲು ಸಾಧ್ಯವಾಗುವ 81.5 ಕೋಟಿ ಮಂದಿ ಭಾರತೀಯರ ಆಧಾರ್ ಮಾಹಿತಿಗಳು ಡಾರ್ಕ್ ವೆಬ್ ನಲ್ಲಿ ಮರಾಟಕ್ಕಿದೆ ಎನ್ನುವ ಆತಂಕಕಾರಿ ಅಂಶವನ್ನು ಅಮೆರಿಕ ಮೂಲದ ಸೈಬರ್ ಭದ್ರತೆ ಸಂಸ್ಥೆ ರಿಸೆಕ್ಯುರಿಟಿ ಬಹಿರಂಗಪಡಿಸಿದೆ. ಇದು ದತ್ತಾಂಶ ಸೋರಿಕೆಯ ಗಂಭೀರ ಪ್ರಕರಣವಾಗಿದೆ.
ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸ ಸೇರಿದಂತೆ ಆಧಾರ್ ಮತ್ತು ಪಾಸ್ಪೋರ್ಟ್ ನ ಸೂಕ್ಷ್ಮ ಮಾಹಿತಿಗಳು ಆನ್ಲೈನ್ ನಲ್ಲಿ ಮಾರಾಟಕ್ಕಿವೆ ಎಂದು ಸಂಸ್ಥೆ ಹೇಳಿದೆ.
ಮಾಧ್ಯಮ ವರದಿಗಳಿಂದ ತಿಳಿದು ಬರುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ ಇದ್ದು, ಇವು ಸೂಕ್ಷ್ಮ ಸ್ವರೂಪದ ಮಾಹಿತಿಗಳು ಎನ್ನಲಾಗಿದೆ. ಐಸಿಎಂಆರ್ ಗೆ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
"ಇಂದಿನ ಜಗತ್ತಿನಲ್ಲಿ ಮಹತ್ವದ ಆಸ್ತಿಗಳನ್ನು ಪಡೆಯುವುದು ವ್ಯವಹಾರಗಳಿಗೆ ಅಗತ್ಯವಾಗಿದೆ. 815 ದಶಲಕ್ಷ ಮಂದಿ ಭಾರತೀಯರ ವೈಯಕ್ತಿಕ ಮಾಹಿತಿ ಲಭ್ಯವಾಗಿರುವುದು, ಮಾಹಿತಿ ಸೋರಿಕೆಯ ಪ್ರಮುಖ ಪ್ರಕರಣವಾಗಿದ್ದು, ಕಂಪನಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ" ಎಂದು ನೇತ್ರಿಕಾ ಕನ್ಸಲ್ಟಿಂಗ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಶಿಕ್ ಹೇಳುತ್ತಾರೆ.
ರಿಸೆಕ್ಯುರಿಟಿ ವೆಬ್ಸೈಟ್ ನ ಪ್ರಕಾರ ಅಕ್ಟೋಬರ್ 9ರಂದು "pwn0001" ಎಂಬ ವೈಯಕ್ತಿಕ ಬಳಕೆದಾರ ಬ್ರೀಚ್ ಫೋರಂಸ್ ಎಂಬ ವೇದಿಕೆಯಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿದ್ದು, 815 ದಶಲಕ್ಷ ಮಂದಿ ಭಾರತೀಯರ ಆಧಾರ್ ಮತ್ತು ಪಾಸ್ಪೋರ್ಟ್ ಮಾಹಿತಿಗಳನ್ನು ಒಳಗೊಂಡ ದಾಖಲೆಗಳು ಲಭ್ಯ ಇವೆ ಎಂದು ಹೇಳಿಕೊಂಡಿದ್ದಾರೆ.