ದೀದಿ ಹಾದಿ ಎಷ್ಟು ಸಲೀಸು?

Update: 2016-04-02 18:54 GMT

ನಾರದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಲಂಚ ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿದ್ದರೂ, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಮಾತ್ರ ಚುನಾವಣಾ ಪ್ರಚಾರಕ್ಕೆ ಸರ್ವಪ್ರಯತ್ನ ಮಾಡುತ್ತಿದ್ದಾರೆ. ದೀದಿ ಗೆಲುವಿನ ವಿಶ್ವಾಸವನ್ನೂ ಹೊಂದಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳ ಹೊರತಾಗಿ ವಾಸ್ತವವಾಗಿ ಮಮತಾ ಬ್ಯಾನರ್ಜಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ವಿಶ್ವಾಸಾರ್ಹವಾಗಿ ತಿಳಿಯಬೇಕಿದ್ದರೆ ಕೇಂದ್ರದ ಮಾಜಿ ರೈಲ್ವೆ ಸಚಿವ ಹಾಗೂ ಟಿಎಂಸಿ ಮುಖಂಡ ಮುಕುಲ್ ರಾಯ್ ಸೂಕ್ತ ವ್ಯಕ್ತಿ. ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮುಕುಲ್ ಹೇಳುತ್ತಿದ್ದರು. ಅಂದರೆ ಮೂರನೆ ಎರಡರಷ್ಟು ಬಹುಮತ! ಆದರೆ ಇದೀಗ ಅವರ ನಿರೀಕ್ಷೆ 180 ಸ್ಥಾನಕ್ಕೆ ಸೀಮಿತವಾಗಿದೆ. ದೀದಿ ಪಕ್ಷ ರಾಜ್ಯದಲ್ಲಿ ಅಷ್ಟೊಂದು ಪ್ರಾಬಲ್ಯ ಉಳಿಸಿಕೊಂಡಿಲ್ಲ ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ. ಎಡಪಕ್ಷಗಳು ಮತ್ತೆ ಎದ್ದುಬರುತ್ತವೆಯೇ ಎನ್ನುವುದು ಪ್ರಶ್ನೆ. ಆದರೆ ಈ ವಿಶ್ವಾಸ ಆ ಪಕ್ಷದ ಮುಖಂಡರಲ್ಲೇ ಇಲ್ಲ. ಖಂಡಿತವಾಗಿಯೂ ಈ ಬಾರಿಯ ಚುನಾವಣಾ ಚಿತ್ರಣ ಗೊಂದಲಮಯ.

ರಾಹುಲ್ ತುಂಬು ವಿಶ್ವಾಸ

ಪಕ್ಷದ ಮಾಧ್ಯಮ ನೀತಿ ಸರಿಪಡಿಸಲು ಕಾಂಗ್ರೆಸ್ ಉಪಾಧ್ಯಕ್ಷ ಮುತುವರ್ಜಿ ವಹಿಸಿದ್ದಾರೆ. ಇದಕ್ಕಾಗಿ ರಾಹುಲ್ ಗಾಂಧಿ ಇತ್ತೀಚೆಗೆ ಕೆಲ ಟಿವಿ ವಾಹಿನಿಗಳ ಹಿರಿಯ ‘ಇನ್‌ಪುಟ್ ಎಡಿಟರ್’ಗಳನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಅವರು ತುಂಬು ವಿಶ್ವಾಸದಿಂದ ಇದ್ದಂತಿತ್ತು. ಪಕ್ಷ ನಿರ್ಧಾರ ಕೈಗೊಂಡಾಗ ಅಧ್ಯಕ್ಷ ಗಾದಿ ಅಲಂಕರಿಸಲು ತಾವು ಸಿದ್ಧ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ತಕ್ಷಣ ತಮಗೆ ಹುದ್ದೆ ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. ಪಕ್ಷದಲ್ಲಿ ಪ್ರತಿಯೊಬ್ಬರೂ ಪ್ರಮುಖ ಎಂಬ ಸಿದ್ಧಾಂತವನ್ನು ಅನುಸರಿಸಬೇಕು ಎನ್ನುವುದು ಅವರ ನಿರೀಕ್ಷೆ. ವಿಷಯಗಳನ್ನು ಸಮರ್ಪಕವಾಗಿ ಗ್ರಹಿಸಿದ ಕಾರಣಕ್ಕೆ ಚುನಾವಣೆಯ ತೀರ್ಪನ್ನು ಅವರು ಸ್ವಾಗತಿಸಿದರು. ಆದರೆ ಅದು ಮೋದಿಯವರ ‘ವನ್ ಮ್ಯಾನ್ ಶೋ’ ಎನ್ನುವುದನ್ನು ನಿರಾಕರಿಸಿದರು. ಮೋದಿ ಸಚಿವರಿಗೇ ಬಾಲ ಕತ್ತರಿಸಿದ ಅನುಭವವಾಗುತ್ತಿದೆ ಎಂದು ರಾಹುಲ್ ಹೇಳಿದರು. ಕಾಂಗ್ರೆಸ್ ಮುಕ್ತ ಭಾರತ ಸೃಷ್ಟಿಸುವ ಬಿಜೆಪಿ ಪರಿಕಲ್ಪನೆ ಕನಸು ಎಂದು ರಾಹುಲ್ ತಿರುಗೇಟು ನೀಡಿದರು.

ದ್ವಂದ್ವದಲ್ಲಿ ಆನಂದಿಬೆನ್

ಹರ್ಯಾಣದಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಇದೀಗ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಕೆಂದರೆ ಇಂಥದ್ದೇ ಮೀಸಲಾತಿಗೆ ಪಟೇಲ್ ಸಮುದಾಯ ಹಕ್ಕೊತ್ತಾಯ ಮುಂದಿಟ್ಟಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕೇಂದ್ರದ ಬಿಜೆಪಿಯ ತಲೆನೋವು ಎಂದರೆ, ಹರ್ಯಾಣದ ಕ್ರಮ ಮತ್ತೆ ಪಟೇಲ್ ಚಳವಳಿ ಪುಟಿದೇಳಲು ಕಾರಣವಾಗುತ್ತದೆ ಎನ್ನುವುದು. ದೇಶದ್ರೋಹದ ಆರೋಪದಲ್ಲಿ ಪಟೇಲ್ ಮೀಸಲಾತಿ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ಇನ್ನೂ ಜೈಲಿನಲ್ಲಿದ್ದರೂ ಮತ್ತೆ ಚಳವಳಿ ವ್ಯಾಪಕವಾಗುವುದಿಲ್ಲ ಎಂಬ ಖಾತ್ರಿ ಇಲ್ಲ. ಕಳೆದ ವರ್ಷ ಪಟೇಲ್ ಸಮುದಾಯ ಹಿಂಸಾತ್ಮಕ ಚಳವಳಿಗೆ ಇಳಿದಾಗ ಸಿಎಂ ಆನಂದಿಬೆನ್ ಪಟೇಲ್, ಆ ಪ್ರಸ್ತಾವವನ್ನು ಕೂಡಾ ತಾವು ಪರಿಶೀಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ. ಮತ್ತೆ ಚಳವಳಿ ತೀವ್ರ ಸ್ವರೂಪ ಪಡೆದರೂ ತಮ್ಮ ಹಿಂದಿನ ನಿಲುವಿಗೆ ಬದ್ಧರಾಗಿರುವ ಸಾಧ್ಯತೆಯೇ ಹೆಚ್ಚು. ಪ್ರಬಲ ನಾಯಕಿಯಾಗಿ ಆನಂದಿಬೆನ್ ಒತ್ತಡಕ್ಕೆ ಮಣಿಯದಿದ್ದರೆ, ಈ ಚೌಕಾಸಿಯಲ್ಲಿ ನಷ್ಟವಾಗುವುದು ಪಕ್ಷಕ್ಕೆ!

ಅಡ್ವಾಣಿಯ ಮೌನ ಬಂಗಾರ!

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಸಂಯಮದಿಂದ ಮೌನವಾಗಿದ್ದರೂ, ಅವರ ಮೌನದ ಬಗ್ಗೆ ಊಹಾಪೋಹ ಕಡಿಮೆಯಾಗಿಲ್ಲ. ಸಭೆಯಲ್ಲಿ ಅಡ್ವಾಣಿ ಹಾಗೂ ಮೋದಿ ಜತೆಗಿರುವ ಕ್ಷಣ ಸೆರೆ ಹಿಡಿಯಲು ಛಾಯಾಗ್ರಾಹಕರು ತುದಿಗಾಲಲ್ಲಿ ನಿಂತಿದ್ದರು. ಈ ಅಪೂರ್ವ ದೃಶ್ಯ ಕ್ಲಿಕ್ಕಿಸುವ ಕ್ಷಣಕ್ಕಾಗಿ ಕಾಯುತ್ತಿದ್ದರು. ದುರದೃಷ್ಟ; ಅಂಥ ಚಿತ್ರ ಸಿಕ್ಕಲೇ ಇಲ್ಲ. ಮೂರು ಗಂಟೆಯ ಸಭೆಯಲ್ಲಿ ಇಬ್ಬರ ನಡುವೆ ಒಂದು ಮಾತು ಕೂಡಾ ವಿನಿಮಯವಾಗಲಿಲ್ಲ. ಅಮಿತ್ ಶಾ, ಮೋದಿ ಹಾಗೂ ಜೇಟ್ಲಿ ಜತೆ ಅಡ್ವಾಣಿ ವೇದಿಕೆ ಹಂಚಿಕೊಂಡಿದ್ದರು. ಆದರೆ ಮಾತಿಲ್ಲ; ಕಥೆ ಇಲ್ಲ; ಒಂದು ಮುಗುಳ್ನಗೆಯೂ ಇಲ್ಲ. ವೇದಿಕೆಯಲ್ಲಿದ್ದವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅವರ ದೇಹಭಾಷೆಯ ಅರಿವಿರುವ ಪ್ರತಿಯೊಬ್ಬರಿಗೂ ಅವರ ಮೌನ ದೊಡ್ಡ ಕಥೆ ಹೇಳುತ್ತಿತ್ತು. ಪಕ್ಷದಲ್ಲಿ ಮೂಲೆಗುಂಪಾದ ಮುತ್ಸದ್ದಿ ಹತಾಶರಾಗಿದ್ದಾರೆ!

ನಾಯ್ಡು..ನಾಯ್ಡು..

ಮೋದಿ ದೇಶಕ್ಕೆ ದೇವರ ವರ. ಬಡವರಿಗೆ ದೇವದೂತ ಎಂಬ ಹೇಳಿಕೆ ಮೂಲಕ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಇತ್ತೀಚೆಗೆ ಸುದ್ದಿಯಾಗಿದ್ದರು. ಸ್ವಭಾವತಃ ಹಾಸ್ಯ ಪ್ರವೃತ್ತಿ ಹಾಗೂ ಉತ್ತಮ ಸ್ವಭಾವದ ನಾಯ್ಡು ಬಾಯಿಬಡುಕ ಅಲ್ಲ. ಆದರೆ ನಾಯ್ಡು ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಕೆಲ ಬಿಜೆಪಿ ಸಚಿವರಿಗೇ ಇರಿಸು ಮುರಿಸಾಯಿತು. ನಾಯ್ಡು ಮಾತು ಒಪ್ಪಲೂ ಅವರು ಸಿದ್ಧರಿರಲಿಲ್ಲ. ಆದರೆ ನಾಯ್ಡು ಆಪ್ತವಲಯದಲ್ಲಿರುವವರ ಪ್ರಕಾರ, ಈ ಗುಣಗಾನಕ್ಕೆ ಕಾರಣವಿದೆ. ನಾಯ್ಡು ತಮ್ಮ ನಾಯಕನನ್ನು ಹಾಡಿಹೊಗಳಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ಜಾಗದಲ್ಲಿ; ಅದೂ ಒಂದು ವಾರವಷ್ಟೇ ಮೊದಲು. ಇದೇ ವೇಳೆ ನಾಯ್ಡು ತಮ್ಮ ಮಗಳು- ಅಳಿಯನ ಜತೆ ಮೋದಿಯನ್ನು ಭೇಟಿಯಾಗಿದ್ದರು. ಈ ಭೇಟಿಯ ವೇಳೆ ಮಗಳು, ಅಪ್ಪನ ಪರ ಶಿಫಾರಸ್ಸು ಮಾಡಿದ್ದಳು ಎನ್ನಲಾಗಿದೆ. ಸುದೀರ್ಘ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ನಾಯ್ಡು ತಮ್ಮ ಆರೋಗ್ಯ ಸೇರಿದಂತೆ ಎಲ್ಲವನ್ನೂ ಪಕ್ಷಕ್ಕಾಗಿ ತ್ಯಾಗ ಮಾಡಿದ ಅವರಿಗೆ ಸಂವಿಧಾನಾತ್ಮಕ ಹುದ್ದೆ ನೀಡುವಂತೆ ಕೋರಿದ್ದಾಳೆ ಎಂದು ಹೇಳಲಾಗುತ್ತಿದೆ. ಇದು ನಾಯ್ಡುಗೆ ಮುಜುಗರ ತಂದಿತು. ಆದ್ದರಿಂದ ಅವರು ತಿದ್ದುಪಡಿಗೆ ನಿರ್ಧರಿಸಿದರು. ಮೋದಿಯನ್ನು ಆಗಸದೆತ್ತರಕ್ಕೆ ಹಾಡಿಹೊಗಳುವುದಕ್ಕಿಂತ ಬೇರೇನು ಮಾಡಲು ಸಾಧ್ಯ? ಆದರೆ ತಮ್ಮ ಮುಜುಗರ ತಪ್ಪಿಸಿಕೊಳ್ಳಲು ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News