ರಾಜ ದಿರಿಸು

Update: 2016-04-09 18:10 GMT

ಕೇಟ್ ಹಾಗೂ ರಾಜಕುಮಾರ ವಿಲಿಯಂ ದಂಪತಿಯ ಅಧಿಕೃತ ಭಾರತ ಭೇಟಿ ಮುಂಬೈನಿಂದ ಆರಂಭವಾಗಿದೆ. ಯುವರಾಜ- ಯುವರಾಣಿ ಹೊಸದಿಲ್ಲಿ, ಖಜಿರಂಗ ರಾಷ್ಟ್ರೀಯ ಉದ್ಯಾನವನ, ಭೂತಾನ್ ರಾಜಧಾನಿ ಥಿಂಪು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಎಪ್ರಿಲ್ 16ರಂದು ತಾಜ್‌ಮಹಲ್‌ಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ 1992ರಲ್ಲಿ (ರಾಜಕುಮಾರಿ ಡಯಾನಾ 1992ರಲ್ಲಿ ಒಂಟಿಯಾಗಿ ಛಾಯಾಚಿತ್ರ ತೆಗೆಸಿಕೊಂಡ ಸ್ಥಳ ಇದು). ಬಲ್ಲ ಮೂಲಗಳ ಪ್ರಕಾರ, ಒಂದು ಸಣ್ಣ ತಂಡ ಈಗಾಗಲೇ ಭಾರತಕ್ಕೆ ರಿಹರ್ಸಲ್ ಭೇಟಿ ನೀಡಿದೆ. ಈ ತಂಡದ ಮುಖ್ಯ ಕಾಳಜಿ ಎಂದರೆ ರಾಜಕುಮಾರಿಯ ದಿರಿಸು. ವರದಿಗಳ ಪ್ರಕಾರ, ರಾಜಕುಮಾರಿ ಆರು ದಿನಗಳ ಅಧಿಕೃತ ಭೇಟಿಗೆ 12ರಿಂದ 15 ಜತೆ ಉಡುಪು, ಸಂಜೆ ಗೌನ್ ಮತ್ತಿತರ ಉಡುಗೆಗಳೊಂದಿಗೆ ಸಜ್ಜಾಗಿದ್ದಾರೆ. ವಿಲಿಯಂ- ಕೇಟ್ ದಂಪತಿಗೆ ಪ್ರಧಾನಿ ಮೋದಿ ಆತಿಥ್ಯವೂ ಇದೆ. ಈ ಔತಣ ಕೂಟಕ್ಕೆ ಆಕೆ ಯಾವ ಉಡುಪು ಧರಿಸುತ್ತಾರೆ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ. ಅಂತೆಯೇ ಪ್ರಧಾನಿ ಯಾವ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದೂ ನಿಗೂಢ. ಬಹುಶಃ ತಮ್ಮ ಹೆಸರು ಇರುವ ಉಡುಪನಲ್ಲ!


ಪ್ರಿಯಾಂಕಾ ಕಾಲ

ಯಾವ ಉಡುಪಿನಲ್ಲಾದರೂ ಆಕರ್ಷಕವಾಗಿ ಹೊಳೆಯುವ ಮತ್ತೊಬ್ಬ ಮಹಿಳೆ ಪ್ರಿಯಾಂಕಾ ಗಾಂಧಿ. ಟಿವಿಯಲ್ಲಿ ಪದೇ ಪದೇ ಕಾಂಗ್ರೆಸ್ ಬೆಂಬಲಿಗರಾಗಿ ಕಾಣಿಸಿಕೊಳ್ಳುವ ತೆಹಸೀನ್ ಪೂನಾವಾಲಾ ಅವರ ವಿವಾಹ ಔತಣಕೂಟದಲ್ಲಿ ಪ್ರಿಯಾಂಕಾ ಎಲ್ಲರ ತಲೆ ತಿರುಗಿಸಿದರು. ಪ್ರಿಯಾಂಕಾ ಇಲ್ಲಿ ಕಾಣಿಸಿಕೊಳ್ಳಲು ಮತ್ತೊಂದು ಕಾರಣವೆಂದರೆ ಪೂನಾವಾಲಾ ವಿವಾಹವಾಗಿರುವುದು ರಾಬರ್ಟ್ ವಾದ್ರಾ ಅವರ ಸೋದರ ಸಂಬಂಧಿ ಮೋನಿಕಾಳನ್ನು. ಪ್ರಿಯಾಂಕಾ ಖುಷಿಯಿಂದ ಓಡಾಡುತ್ತಾ ಎಲ್ಲರ ಜತೆ ಬೆರೆಯುತ್ತಿದ್ದರು. ‘‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖವಾಗುತ್ತೀರಾ’’ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕಿಲಕಿಲನೆ ನಕ್ಕು, ‘‘ಆ ರೀತಿಯ ಏನನ್ನೂ ನಾನು ಇದುವರೆಗೆ ಕೇಳಿಸಿಕೊಂಡಿಲ್ಲ’’ ಎಂದುಬಿಟ್ಟರು. ಅಷ್ಟಕ್ಕೇ ಸೀಮಿತವಾಗದೆ, ಉತ್ತರ ಪ್ರದೇಶ ಚುನಾವಣೆ ಅಥವಾ ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೂ ಸಹೋದರ ರಾಹುಲ್ ಗಾಂಧಿಯ ಇಚ್ಛೆಗೆ ಅನುಗುಣವಾಗಿ ತೆಗೆದುಕೊಳ್ಳುವುದಾಗಿ ಹೇಳಿದರು. ರಕ್ಷಣಾತ್ಮಕವಾಗಿ ಪರಿಸ್ಥಿತಿ ನಿಭಾಯಿಸುವ ಕಲೆ ಆಕೆಗೆ ಚೆನ್ನಾಗಿ ಗೊತ್ತು.


ಹೊಸ ಹುರುಪು?

ಜನಸಾಮಾನ್ಯರು ಹೋಳಿ ಸಂದರ್ಭದಲ್ಲಿ ಸ್ನೇಹಿತರ ಜತೆಗೆ ಓಕುಳಿಯಾಟದಲ್ಲಿ ಖುಷಿ ಕ್ಷಣಗಳನ್ನು ಕಾಣುತ್ತಿದ್ದರೆ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಾಗಿರುವ 150 ಮಂದಿಯನ್ನು ಅನುಸರಿಸಲು ಬಿಡುವು ಮಾಡಿಕೊಂಡರು. ಈ ಹಬ್ಬದ ಹುರುಪನ್ನು ಹಂಚಿಕೊಳ್ಳುವ ಒಳ್ಳೆಯ ಭಾವನೆ ಮೂಡಿಸುವ ಸಂಕೇತವಾಗಿ ಪ್ರಧಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಿಸಿತು. ಇದೀಗ ಮೋದಿ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ಶಶಿ ತರೂರ್ ಹೀಗೆ ವಿಭಿನ್ನ ಯೋಚನಾ ಲಹರಿಯವರನ್ನು ಕೂಡಾ ಪಾಲೋವರ್‌ಗಳಾಗಿ ಹೊಂದಿದ್ದಾರೆ. ಶುಭಹಾರೈಕೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದವರಲ್ಲಿ ಕೇಜ್ರಿವಾಲ್ ಮೊದಲಿಗರು. ಇದು ಕೇಂದ್ರ- ರಾಜ್ಯ ಸಂಬಂಧದ ಪ್ರತೀಕ ಎಂದು ಕೇಜ್ರಿವಾಲ್ ಬಣ್ಣಿಸಿದರು. ಈ ಸ್ನೇಹಿತರ ನಡುವಿನ ಟ್ವೀಟ್‌ಗೆ ಹುಳಿ ಹಿಂಡುವ ಟ್ವೀಟ್‌ಗಳಿಗೆ ಕೆಲ ಸಿನಿಕರು ಸಿದ್ಧರಾಗುತ್ತಿದ್ದಾರೆ.


ರಾಷ್ಟ್ರಪತಿ ಭವನಕ್ಕೆ ಓಟ

ರಾಷ್ಟ್ರಪತಿ ಚುನಾವಣೆ ಮುಂದಿನ ವರ್ಷ ನಡೆಯಬೇಕಿದೆ. ಆದರೆ ಈಗಲೇ ರಾಷ್ಟ್ರಪತಿ ಭವನಕ್ಕೆ ಓಟ ಆರಂಭವಾಗಿದೆ. ಪ್ರಣವ್ ಮುಖರ್ಜಿಯವರ ಉತ್ತರಾಧಿಕಾರಿಗಳಾಗಲು ಡಜನ್‌ಗಟ್ಟಲೆ ಹೆಸರುಗಳು ತೇಲಿಬರುತ್ತಿವೆ. ಅಮರ್‌ಸಿಂಗ್ ಅವರ ಪ್ರಕಾರ, ಪ್ರಧಾನಿ ಮೋದಿಯ ಆದ್ಯತೆಯ ಅಭ್ಯರ್ಥಿ ಅಮಿತಾಭ್ ಬಚ್ಚನ್. ಕುತೂಹಲದ ವಿಚಾರವೆಂದರೆ, ಸಿಂಗ್ ಸಿದ್ಧಾಂತದ ಬಗ್ಗೆ ದೃಢಪಡಿಸುವ ಅಥವಾ ನಿರಾಕರಿಸುವ ಧ್ವನಿ ಎಲ್ಲಿಂದಲೂ ಕೇಳಿಬಂದಿಲ್ಲ. ಆದರೆ ಬಚ್ಚನ್ ಹಾಗೂ ಸಿಂಗ್ ನಡುವಿನ ಸಂಬಂಧ ಮೊದಲಿನಷ್ಟು ಮಧುರವಾಗಿಲ್ಲ. ಈ ಕಾರಣದಿಂದ ಪರೀಕ್ಷಿಸುವ ಸಲುವಾಗಿ ಸಿಂಗ್ ಈ ಹೆಸರು ತೇಲಿಬಿಟ್ಟಿದ್ದಾರೆ ಎಂಬ ವಾದವೂ ಕೇಳಿಬರುತ್ತಿದೆ. ಇತರ ಹುರಿಯಾಳುಗಳೆಂದರೆ ಎಲ್.ಕೆ.ಅಡ್ವಾಣಿ, ಮುರಲಿ ಮನೋಹರ ಜೋಶಿ, ನಜ್ಮಾ ಹೆಪ್ತುಲ್ಲಾ, ಸುಮಿತ್ರಾ ಮಹಾಜನ್ ಹಾಗೂ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ. ಕೆಲ ಪಂಡಿತರ ಪ್ರಕಾರ ಮುಖರ್ಜಿ ಎರಡನೆ ಅವಧಿ ಪಡೆದರೂ ಆಶ್ಚರ್ಯವಿಲ್ಲ. ಖಂಡಿತವಾಗಿಯೂ ಇದು ಫೋಟೊ ಫಿನಿಶ್ ಫಲಿತಾಂಶ ತರುವ ರೇಸ್.


ಜೇಟ್ಲಿಗೆ ಆಭರಣ ತಲೆನೋವು

ಆಭರಣ ವರ್ತಕರ ಪ್ರತಿಭಟನೆ ಹೊಸ ಪ್ರಶ್ನೆ ಹುಟ್ಟುಹಾಕಿದೆ. ಆಭರಣ ಅಗತ್ಯತೆಯೇ ಅಥವಾ ಐಷಾರಾಮಿ ವಸ್ತುವೇ? ಬಿಜೆಪಿ ಸಂಸದರ ನಿಯೋಗ ಇತ್ತೀಚೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ, ಚಿನ್ನಾಭರಣಗಳ ಮೇಲೆ ಶೇ.ಒಂದರ ಎಕ್ಸೈಸ್ ಸುಂಕ ವಿಧಿಸುವ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಚಿನ್ನವರ್ತಕರಿಗೆ ಬೆಂಬಲ ಸೂಚಿಸಿತು. ಈ ಭೇಟಿ ವೇಳೆ ಜೇಟ್ಲ್ಲಿ ವಿವೇಯುಕ್ತವಾಗಿ ಹಾಗೂ ಗಮನವಿಟ್ಟು ಸಮಸ್ಯೆ ಆಲಿಸಿದರು. ಆದರೆ ಅಂತಿಮವಾಗಿ ಚಿನ್ನದ ಆಭರಣದಂಥ ಐಷಾರಾಮಿ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ತರುವುದು ನ್ಯಾಯಸಮ್ಮತ ಎಂಬ ನಿಲುವಿಗೇ ಅಂಟಿಕೊಂಡರು. ಆದರೆ ಸಂಸದರು ಇದನ್ನು ಒಪ್ಪಲಿಲ್ಲ. ಭಾರತೀಯ ಪರಿಸ್ಥಿತಿಯಲ್ಲಿ ಚಿನ್ನದ ಆಭರಣಗಳಿಗೆ ವಿಶೇಷ ಅರ್ಥವಿದೆ. ಅದು ಅಗತ್ಯತೆಯೇ ಹೊರತು ಐಷಾರಾಮಿ ವಸ್ತುವಲ್ಲ ಎಂಬ ವಾದ ಮಂಡಿಸಿದರು. ಈ ವಾದಕ್ಕೆ ಪುರಾವೆಗಳನ್ನೂ ಒದಗಿಸಿದರು. ಎಲ್ಲ ಸಾಮಾಜಿಕ ಸಮಾರಂಭಗಳಲ್ಲಿ ಚಿನ್ನ ಧರಿಸುವುದು ಅಗತ್ಯತೆ ಎಂದು ಹೇಳಿದರು. ಇದಕ್ಕೆ ಜೇಟ್ಲ್ಲಿ ಏನು ಹೇಳುತ್ತಾರೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News