ಸಂಯುಕ್ತ ಜನತಾದಳ ಮುಖಂಡ ಶರದ್ ಯಾದವ್ ಕಳೆದ ವಾರ, ಕೊಲ್ಕತ್ತಾ ಹೊರವಲಯದ ಹೌರ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿಯ ಪರ ಪ್ರಚಾರ ರ್ಯಾಲಿಗಾಗಿ ಕೊಲ್ಕತ್ತಾಗೆ ಹೋಗಬೇಕಿತ್ತು. ಈ ರ್ಯಾಲಿಯಲ್ಲಿ ಸಿಪಿಎಂ ಮುಖಂಡರ ಜತೆ ವೇದಿಕೆ ಹಂಚಿಕೊಳ್ಳಬೇಕಿತ್ತು. ಶರದ್ ಯಾದವ್ ಅವರ ದಿಲ್ಲಿ- ಕೊಲ್ಕತ್ತಾ ಪ್ರಯಾಣಕ್ಕಾಗಿ ಸಿಪಿಎಂ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಬೇಕಿತ್ತು. ಶರದ್ ಯಾದವ್ ಏರ್ ಇಂಡಿಯಾ ವಿಮಾನ ಪ್ರಯಾಣಕ್ಕೆ ಆದ್ಯತೆ ನೀಡಿದ್ದರು. ಆದರೆ ಆ ಸಮಯಕ್ಕೆ ಏರ್ ಇಂಡಿಯಾ ವಿಮಾನ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಸಿಪಿಎಂ ಮುಖಂಡರು ಇಂಡಿಗೊ ವಿಮಾನ ಟಿಕೆಟ್ ಕಾಯ್ದಿರಿಸಿ, ವೇಳೆ ಬಗ್ಗೆ ಮಾಹಿತಿ ನೀಡಿದರು. ಸಹಜವಾಗಿಯೇ ಯಾದವ್‌ಗೆ ತೊಂದರೆ ಯಾಯಿತು. ಏಕೆಂದರೆ ಏರ್ ಇಂಡಿಯಾದಂತೆ ಇಂಡಿಗೊ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೌಲಭ್ಯ ಇಲ್ಲ. ಆದ್ದರಿಂದ ಅವರು ಇಂಡಿಗೊ ವಿಮಾನ ಯಾನವನ್ನು ನಿರಾಕರಿಸಿದರು. ಸಿಪಿಎಂ ಮೂಲಗಳ ಪ್ರಕಾರ, ಎಕಾನಮಿ ಕ್ಲಾಸ್‌ನ ಸೀಟ್‌ಗಳು ತಮಗೆ ಹಿಡಿಸುತ್ತಿಲ್ಲ ಎಂದು ಶರದ್ ಯಾದವ್ ಹೇಳಿದ್ದರು. ಆದ್ದರಿಂದ ಯಾದವ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿಲ್ಲ. ಶರದ್ ಯಾದವ್ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಿಂತ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವುದೇ ಮುಖ್ಯವಾಯಿತೇ ಎಂದು ಸಿಪಿಎಂ ಮುಖಂಡರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಹುಶಃ ಇದಕ್ಕೆ ಯಾದವ್ ಅವರ ವಿವರಣೆ ಬಹುಶಃ ಬೇರೆಯೇ ಇರಬಹುದು.
ಮಾಯಾವತಿ ರಕ್ಷಣಾತ್ಮಕ ಆಟ
2014ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ
ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥೆ ತೀರಾ ಅಸಮಾಧಾನಗೊಂಡಿದ್ದರು. ಆದರೆ ಇತ್ತೀಚಿನ ಸಮೀಕ್ಷೆಯ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಯಾ ಪಕ್ಷ ಜಯಶಾಲಿಯಾಗುವ ನಿರೀಕ್ಷೆ ಇದೆ. ಆದ್ದರಿಂದ ಪಕ್ಷದ ಕೆಲ ಮುಖಂಡರು ಪ್ರಭಾವಿ ಜಾತಿ ಮುಖಂಡರ ಮೇಲೆ ಪ್ರಭಾವ ಬೀರುವಂತೆ ಅಧಿನಾಯಕಿಗೆ ಮನವಿ ಮಾಡಿದ್ದಾರೆ. ಆದರೆ ಪಕ್ಷದ ಪ್ರಮುಖ ಆಸ್ತಿಯಾದ ದಲಿತ ಮತಗಳನ್ನು ಸಮಗ್ರವಾಗಿ ಹಿಡಿದಿಟ್ಟುಕೊಳ್ಳುವಂತೆ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಈ ಮತಬುಟ್ಟಿಗೆ ಕೈಹಾಕಲು ಹುನ್ನಾರ ನಡೆಸುತ್ತಿರುವುದು ಇದಕ್ಕೆ ಕಾರಣ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕೇಶವ ಪ್ರಸಾದ್ ವೌರ್ಯ ಅವರನ್ನು ನೇಮಕ ಮಾಡಿರುವುದನ್ನು ಮಾಯಾವತಿ ಉದಾಹರಣೆ ನೀಡಿದ್ದಾರೆ ಎನ್ನಲಾಗಿದೆ. ಮಾಯಾವತಿಯ ಲೆಕ್ಕಾಚಾರ ಸರಳ. ಬಿಎಸ್ಪಿಗೆ ನಿಷ್ಠೆ ಹೊಂದಿರುವ ಮತದಾರರನ್ನು ಭದ್ರವಾಗಿ ಮುಷ್ಟಿಯಲ್ಲಿ ಇರಿಸಿಕೊಳ್ಳದಿದ್ದರೆ, ಬ್ರಾಹ್ಮಣರು ಅಥವಾ ಮುಸ್ಲಿಮ್ ಮತಗಳನ್ನು ತೆಕ್ಕೆಗೆ ಪಡೆದುಕೊಳ್ಳುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಅಮಿತ್ ಶಾ ಮಾಸ್ಟರ್‌ಸ್ಟ್ರೋಕ್!
ಬಿಜೆಪಿ ಇತ್ತೀಚೆಗೆ ರಾಜ್ಯ ಘಟಕದ ಅಧ್ಯಕ್ಷರ ಬೆಟಾಲಿಯನ್ ಪ್ರಕಟಿಸಿದೆ. ಬಿಜೆಪಿ ಆಯ್ಕೆಯಲ್ಲಿ ಅಂಥ ಒಂದು ಅಚ್ಚರಿಯ ಹೆಸರು ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಹಿಂದುಳಿದ ವರ್ಗಗಳ ನಾಯಕ ಕೇಶವ ಪ್ರಸಾದ್ ವೌರ್ಯ ಅವರದ್ದು. ತೀರಾ ಹಿಂದುಳಿದ ವರ್ಗಕ್ಕೆ ಸೇರಿದ ವೌರ್ಯ, ತಮ್ಮ ಶಿಕ್ಷಣ ವೆಚ್ಚಕ್ಕೆ ಹಣ ಹೊಂದಿಸುವ ಸಲುವಾಗಿ ಯುವಕರಾಗಿದ್ದಾಗ ಪತ್ರಿಕೆ ಹಾಗೂ ಚಹಾ ಮಾರಾಟ ಮಾಡುತ್ತಿದ್ದವರು. ಪಕ್ಷದ ತೆಕ್ಕೆಗೆ ಬಂದ ಮೇಲೂ ವಿಶ್ವಹಿಂದೂ ಪರಿಷತ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಹಲವು ಮುಸ್ಲಿಂ ವಿರೋಧಿ ಗಲಭೆಗಳಲ್ಲೂ ಆರೋಪಿ. ವೌರ್ಯ 2013ರಲ್ಲಿ ಪಕ್ಷದ ಅನುಮತಿ ಇಲ್ಲದೆ ಪಕ್ಷದ ದೊಡ್ಡ ರ್ಯಾಲಿಯನ್ನು ಸಂಘಟಿಸಿದ್ದರು. ಉತ್ತರ ಪ್ರದೇಶ ಪ್ರವಾಸದಲ್ಲಿದ್ದ ಶಾ ಆ ರ್ಯಾಲಿಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿ, ಶಾ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇನ್ನೊಂದೆಡೆ, ವೌರ್ಯ ಅವರ ಸಂಘಟನಾ ಚಾತುರ್ಯ ಶಾ ಅವರನ್ನು ದಂಗುಬಡಿಸಿತ್ತು. ಬಿಜೆಪಿ ದುರ್ಬಲ ಎಂದು ಪರಿಗಣಿಸಲ್ಪಟ್ಟ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿಸಿದ ಬಗ್ಗೆ ಶಾ ತೀರಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಾರಿ ಸಹಜವಾಗಿಯೇ ಶಾ ಗಮನ, ಚುನಾವಣೆ ಗೆಲ್ಲಿಸಿಕೊಡುವ ನಾಯಕರ ಮೇಲಿತ್ತು. ಈ ಕಾರಣದಿಂದ ತಮಗೆ ಅಷ್ಟೊಂದು ಪ್ರಿಯರಲ್ಲದ ವ್ಯಕ್ತಿಯನ್ನಾದರೂ ಆಯ್ಕೆ ಮಾಡಲು ಅವರು ಸಿದ್ಧರಿದ್ದರು. ಅಂಥವರಲ್ಲಿ ವೌರ್ಯ ಒಬ್ಬರು. ಈಗಾಗಲೇ ಸಮೀಕ್ಷೆಗಳ ಪ್ರಕಾರ, ಮಾಯಾವತಿ ಮುನ್ನಡೆಯಲ್ಲಿರುವುದರಿಂದ ಮೌರ್ಯ ಆಯ್ಕೆ ಅಮಿತ್ ಶಾ ರಣತಂತ್ರದ ಮಾಸ್ಟರ್ ಸ್ಟ್ರೋಕ್.
ಸೋನಿಯಾಗೆ ಲಾಭ
ಇತ್ತೀಚೆಗೆ ರಾಜಧಾನಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮುಶೈರಾ- ಕವಿ
ಸಮ್ಮೇಳನದಲ್ಲಿ ಪಾಲ್ಗೊಂಡು ಖುಷಿಯಿಂದ ತಲೆದೂಗಿದರು. ಕೆಲ ಕವಿಗಳ ಕವನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನಿಯಾ, ಅಲ್ಲಿ ಕಳೆದಷ್ಟೂ ಕಾಲವೂ ಫುಲ್ ಖುಷ್ ಆಗಿದ್ದರು. ಸಾಮಾನ್ಯವಾಗಿ ಮುಖ ಗಂಟಿಕ್ಕಿಕೊಂಡು ಇರುತ್ತಿದ್ದ ಸೋನಿಯಾ ಅವರ ಲುಕ್ ಸಮ್ಮೇಳನದಲ್ಲಿ ಸಂಪೂರ್ಣ ಬದಲಾಗಿತ್ತು. ಆದರೆ ಈ ಸಮ್ಮೇಳನದಲ್ಲಿ ಸೋನಿಯಾ ಭಾಗವಹಿಸಿದ್ದಕ್ಕೆ ಇನ್ನೊಂದು ವಿಶೇಷ ಅರ್ಥವಿದೆ ಎಂದು ಪಕ್ಷದ ಕೆಲವರು ಹೇಳುತ್ತಾರೆ. ಅವರ ಆಪ್ತರ ಪ್ರಕಾರ, ಸಾಹಿತ್ಯಕ ವಲಯಕ್ಕೆ ಹತ್ತಿರವಾಗಿ ಕವಿಗಳು ಹಾಗೂ ಸಾಹಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇದು. ಬಿಜೆಪಿ ನೇತೃತ್ವದ ಮೋದಿ ಸರಕಾರ ವಿರುದ್ಧ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಆ ವಲಯಕ್ಕೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಕುಮಾರ್ ವಿಶ್ವಾಸ್ ಅವರಂಥ ಕವಿಗಳು, ಯುಪಿಎ-2 ಆಡಳಿತಾವಧಿಯಲ್ಲಿ ಸರಕಾರಿ ವಿರೋಧಿ ಭಾವನೆಗಳನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಸೋನಿಯಾ ಬಹುಶಃ ಮರೆತಿಲ್ಲ. ಸೋನಿಯಾ ಮುಶಾರಿಯಾದಲ್ಲಿ ಭಾಗವಹಿಸಿದ್ದಕ್ಕೆ ವಾಸ್ತವ ಹಿನ್ನೆಲೆ ಇದು. ಕೇಸರಿ ಆಡಳಿತ ವಿರುದ್ಧದ ಸೋನಿಯಾ ಗೇಮ್ ಪ್ಲಾನ್‌ನ ದೊಡ್ಡ ಕಥೆ ಇದರಲ್ಲಿ ಅಡಗಿದೆ. ಮೈತ್ರಿ ಬಚಾವೊ
ಕಾಶ್ಮೀರ ಎನ್‌ಐಟಿ ವಿವಾದ ಆರಂಭವಾದ ಮೊದಲ ದಿನದಿಂದಲೇ ಕೇಂದ್ರ ಸರಕಾರ ಹಾಗೂ ಬಿಜೆಪಿ ನಾಯಕರು ಈ ವಿಷಯ ತಮ್ಮ ಕೈ ಮೀರಿ ಹೋಗಬಾರದು ಎಂದು ಪ್ರಯತ್ನ ನಡೆಸಿದರು. ಎಲ್ಲ ಸಚಿವರು ಹಾಗೂ ಪಕ್ಷದ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ನಿರ್ದೇಶನವೆಂದರೆ, ಇತ್ತೀಚೆಗೆ ಬಿಜೆಪಿ ಹಾಗೂ ಪಿಡಿಪಿ ನಡುವೆ ಆಗಿರುವ ಮೈತ್ರಿಗೆ ಇದರಿಂದ ಯಾವ ಭಂಗವೂ ಉಂಟಾಗಬಾರದು. ಎನ್‌ಐಟಿ ಕ್ಯಾಂಪಸ್‌ನಲ್ಲಿ ಘೋಷಣೆ ಕೂಗಿದ ಹೊರರಾಜ್ಯದ ವಿದ್ಯಾರ್ಥಿಗಳನ್ನು ಪೊಲೀಸರು ಮಟ್ಟಹಾಕಲು ನಿರ್ಧರಿಸಿದ ತಕ್ಷಣ ಕಾಶ್ಮೀರದ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯತೆಯ ಕಿಚ್ಚುಹಚ್ಚುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಸ್ಥಳೀಯ ಮುಖಂಡರು ಇದಕ್ಕೆ ಕಡಿವಾಣ ಹಾಕಿದರು. ಎನ್‌ಐಟಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಉದ್ದೇಶಿಸಿದ್ದ ಬಿಜೆಪಿ ಅನುಯಾಯಿ ಅನುಪಮ್ ಖೇರ್ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲೇ ತಡೆಯಲಾಯಿತು. 2014ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ ಅಮೇಠಿಯಿಂದ ಸ್ಪರ್ಧಿಸಿದಾಗ, ಅವರ ಚುನಾವಣೆಯ ಉಸ್ತುವಾರಿ ಹೊಂದಿದ್ದ ಶಿಲ್ಪಿ ತಿವಾರಿ ಅವರ ಉದ್ದೇಶಿತ ದಿಲ್ಲಿ- ಶ್ರೀನಗರ ಯಾತ್ರೆಗೂ ಬ್ರೇಕ್ ಹಾಕಲಾಯಿತು. ಎನ್‌ಐಟಿ ಪ್ರತಿಭಟನಾಕಾರರಿಗೆ ತಿರಂಗ ಧ್ವಜ ಹಸ್ತಾಂತರಿಸಲು ಶಿಲ್ಪಿ ಉದ್ದೇಶಿಸಿದ್ದರು. ಒಟ್ಟಾರೆ ಬಿಜೆಪಿಯ ಉದ್ದೇಶ ಮೈತ್ರಿಗೆ ಭಂಗ ಬರದಂತೆ ನೋಡಿಕೊಳ್ಳುವುದು!