ಕನ್ಹಯ್ಯ ಕೃತಿ?

Update: 2016-04-23 18:47 GMT

ದಿಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಬಳಿಕ ದೇಶಾದ್ಯಂತ ಮನೆಮಾತಾಗಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಇದೀಗ ಹೊಸ ಪ್ರಕಾಶಕರೊಬ್ಬರ ಜತೆ ಡೀಲ್ ಕುದುರಿಸಿದ್ದಾರೆ. ಈ ಪುಸ್ತಕ ಡೀಲ್ ಹಲವು ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಈ ಕೃತಿಯಲ್ಲಿ ಕನ್ಹಯ್ಯಾ ಬಿಹಾರದಲ್ಲಿ ತಮ್ಮ ಬಾಲ್ಯದ ಕಷ್ಟಕಾರ್ಪಣ್ಯಗಳು, ಬಳಿಕ ಜೆಎನ್‌ಯು ಸೇರಿದ್ದು, ಅಲ್ಲಿ ಎದುರಿಸಿದ ಸಮಸ್ಯೆಗಳು, ಬಂಧನ ಸಂದರ್ಭದ ಪರಿಸ್ಥಿತಿ ಮತ್ತಿತರ ವಿಷಯಗಳನ್ನು ದಾಖಲಿಸಲಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಮಾತುಗಾರಿಕೆ ಕೌಶಲವನ್ನು ಹೇಗೆ ಬೆಳೆಸಿಕೊಳ್ಳುವುದು ಸಾಧ್ಯವಾಯಿತು ಎನ್ನುವುದನ್ನೂ ಬಣ್ಣಿಸಲಿದ್ದಾರೆ. ಅವರ ಭಾಷಣಗಳು ಅನುಭವಿ ರಾಜಕಾರಣಿಗಳಿಗಿಂತಲೂ ಜನರನ್ನು ಮೋಡಿ ಮಾಡುವಂಥದ್ದು. ಕನ್ಹಯ್ಯಾ ಅವರಿಗೆ ಎಷ್ಟು ಹಣ ನೀಡಲಾಗಿದೆ ಎನ್ನುವುದನ್ನು ಪ್ರಕಾಶಕರು ಬಾಯಿ ಬಿಟ್ಟಿಲ್ಲ. ಕನ್ಹಯ್ಯಿ ಅವರಂತೂ ತಾವು ಪುಸ್ತಕ ಕರಾರು ಮಾಡಿಕೊಂಡದ್ದನ್ನು ಖಚಿತಪಡಿಸಲೂ ಸಿದ್ಧರಿಲ್ಲ. ಆದರೆ ದಿಲ್ಲಿಯಲ್ಲಿ ಹರಡುವ ವದಂತಿಗಳು ಸುಳ್ಳಾಗುವುದು ವಿರಳ.

ಜೈರಾಂ ರಮೇಶ್ ತ್ರಿಶಂಕು
ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಮಾಜಿ ಸಚಿವ ಜೈರಾಂ ರಮೇಶ್ ಅವರಿಗೆ ಈಗ ಭೀತಿ ಎದುರಾಗಿದೆ. ಮುಂದಿನ ಜೂನ್‌ನಲ್ಲಿ ಅವರ ಮೇಲ್ಮನೆ ಸದಸ್ಯತ್ವದ ಅವಧಿ ಪೂರ್ಣಗೊಳ್ಳಲಿದೆ. ಅವರಿಗೆ ಮತ್ತೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಹೆಣಗುತ್ತಿದೆ. ರಮೇಶ್ ತಮ್ಮ ಪ್ರಭಾವಿ ಭಾಷಣದ ಮೂಲಕ ಕಾಂಗ್ರೆಸ್ ಸಂಸದೀಯ ಮುಖಂಡರಾಗಿ ರಾಜ್ಯಸಭೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಕೇವಲ ಆ ಅಂಶ ಅವರಿಗೆ ರಾಜ್ಯಸಭೆ ಟಿಕೆಟ್ ಖಾತ್ರಿಪಡಿಸದು. ರಮೇಶ್ ಆಯ್ಕೆಗೆ ಅವಕಾಶ ಇರುವ ಏಕೈಕ ರಾಜ್ಯವೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ. ಆದರೆ ಪಕ್ಷದ ಮೂಲಗಳ ಪ್ರಕಾರ, ಕರ್ನಾಟಕದಿಂದ ರಮೇಶ್ ಅವರನ್ನು ಆಯ್ಕೆ ಮಾಡಿ ಕಳುಹಿಸುವ ಬಗ್ಗೆ ರಾಜ್ಯ ಮುಖಂಡರಲ್ಲಿ ಅಸಮಾಧಾನ ಇದೆ. ಇದುವರೆಗೆ ಆಂಧ್ರಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಜೈರಾಂ ರಮೇಶ್ ಅವರಿಗೆ ಈಗಾಗಲೇ ಪಕ್ಷದ ಹೈಕಮಾಂಡ್ ಮಾಹಿತಿ ನೀಡಿ, ಆ ರಾಜ್ಯದಿಂದ ನಡೆಯುವ ಚುನಾವಣೆಯಲ್ಲಿ ರಮೇಶ್ ಅವರಿಗೆ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ. ರಮೇಶ್ ಸಂದಿಗ್ಧ ಸ್ಥಿತಿಯಲ್ಲಿರುವುದಂತೂ ನಿಜ.

ಉಪರಾಷ್ಟ್ರಪತಿ ಹುದ್ದೆ ಮೇಲೆ ನಜ್ಮಾ ಕಣ್ಣು?
ರಾಜ್ಯಪಾಲ ಹುದ್ದೆಯನ್ನು ಹಲವು ಮಂದಿ ರಾಜಕಾರಣಿಗಳು ಖುಷಿಯಿಂದಲೇ ಸ್ವೀಕರಿಸುತ್ತಾರೆ. ಆದರೆ ಅಂಥವರ ಪಟ್ಟಿಯಲ್ಲಿ ನಜ್ಮಾ ಹೆಪ್ತುಲ್ಲಾ ಸೇರಿಲ್ಲ. ತಮ್ಮನ್ನು ರಾಜಭವನಕ್ಕೆ ಸೇರಿಸುವ ಪ್ರಯತ್ನಕ್ಕೆ ಹೆಪ್ತುಲ್ಲಾ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದೆ. ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾದ ಎಲ್ಲ ಅನೌಪಚಾರಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಮತ್ತೊಂದು ವರ್ಷ ಸಚಿವೆಯಾಗಿಯೇ ಮುಂದುವರಿಯಲು ಹೆಪ್ತುಲ್ಲಾ ಇಚ್ಛಿಸಿದ್ದಾರೆ ಎನ್ನಲಾಗಿದೆ. ಹೆಪ್ತುಲ್ಲಾ ಮನವಿಯ ಹಿಂದೆ ನಿರ್ದಿಷ್ಟ ಕಾರಣವೂ ಇದೆ. ಮುಂದಿನ ವರ್ಷ ಉಪ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಬೇಕಿದೆ. ಈಗ ಇರುವ ಬಲಾಬಲದ ಪ್ರಕಾರ, ಎನ್‌ಡಿಎ ಈ ಸ್ಥಾನ ಗೆಲ್ಲುವುದು ನಿಚ್ಚಳ. ಸಚಿವ ಸಂಪುಟದ ಹಿರಿಯ ಸದಸ್ಯೆಯಾಗಿ, ರಾಜ್ಯಪಾಲರ ಹುದ್ದೆಯ ಬದಲಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ ಚೌಕಾಸಿ ಮಾಡಲು ಹೆಪ್ತುಲ್ಲಾ ನಿರ್ಧರಿಸಿದ್ದಾರೆ ಎನ್ನುವುದು ಅವರ ಆಪ್ತ ವಲಯದಲ್ಲಿ ಕೇಳಿಬರುವ ಮಾತು.

ರಾಹುಲ್ ವರ್ಸಸ್ ಇರಾನಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಸ್ಮತಿ ಇರಾನಿಯವರನ್ನು ಸೋಲಿಸಿರಬಹುದು. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ನಡುವಿನ ಜಿದ್ದಿನ ಸ್ಪರ್ಧೆ ಮುಗಿದಿಲ್ಲ. ತನ್ನ ಹಣಕಾಸು ಅಗತ್ಯತೆಗಳಿಗಾಗಿ ಪತ್ರಿಕೆ ಮಾರುವ ಕಾಯಕದಲ್ಲಿ ತೊಡಗಿರುವ 13 ವರ್ಷದ ಬಾಲಕ ಕೌಶಲ್ ಶಕ್ಯಾ, ಇವರಿಬ್ಬರ ನಡುವಿನ ಗುದ್ದಾಟದಿಂದ ಲಾಭ ಪಡೆದಿದ್ದಾನೆ ಎನ್ನಲಾಗಿದೆ. 2013ರ ಎಪ್ರಿಲ್‌ನಲ್ಲಿ ಭೋಪಾಲ್‌ನ ಸಿಗ್ನಲ್‌ದೀಪದ ಬಳಿ ಪತ್ರಿಕೆ ಮಾರುತ್ತಿದ್ದ ಕೌಶಲ್‌ಗೆ ದಿಢೀರನೆ ರಾಹುಲ್ ಗಾಂಧಿಯನ್ನು ಸಂಧಿಸುವ ಅವಕಾಶ ಸಿಕ್ಕಿತು. ಮರುದಿನ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಾಂತಿಲಾಲ್ ಭೂರಿಯಾ ಕೌಶಲ್‌ನ ಶಿಕ್ಷಣಕ್ಕೆ ನೆರವು ನೀಡುವ ಆಶ್ವಾಸನೆ ನೀಡಿದರು. ಆದರೆ 2014ರಲ್ಲಿ ಭೂರಿಯಾ ಹುದ್ದೆಯಿಂದ ನಿರ್ಗಮಿಸಿದಾಗ, ಕೌಶಲ್ ತನ್ನ ಶಾಲಾ ಶಿಕ್ಷಣವನ್ನು ನಿಲ್ಲಿಸಿದ್ದು ಯಾರ ಗಮನಕ್ಕೂ ಬರಲಿಲ್ಲ. ಈ ವಿಷಯ ಇರಾನಿ ಗಮನಕ್ಕೆ ಬಂದಾಗ, ಕೇಂದ್ರೀಯ ವಿದ್ಯಾಲಯವೊಂದಕ್ಕೆ ಆತನನ್ನು ಸೇರಿಸಿಕೊಳ್ಳುವಂತೆ ಸೂಚನೆ ನೀಡಿ, ಆತನ ಶಿಕ್ಷಣದ ವೆಚ್ಚ ಭರಿಸುವಂತೆ ಆದೇಶ ನೀಡಿದರು. ಇದರಿಂದ ಮುಜುಗರಕ್ಕೀಡಾಗಿರುವ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು, ತಮ್ಮ ಬಾಸ್‌ಗೆ ವಿವರಣೆ ನೀಡಲು ಸಜ್ಜಾಗುತ್ತಿದ್ದಾರೆ. ಆದರೆ ಖಂಡಿತವಾಗಿಯೂ ಕೌಶಲ್ ದೂರು ನೀಡಲಾರ.

ಉಮಾ ಆಹಾರ ಶೈಲಿ
ರಾಜಧಾನಿಯಲ್ಲಿ ಇತ್ತೀಚೆಗೆ ಭಾರತದ ಜಲ ಸಪ್ತಾಹ-2016 ಆಯೋಜಿಸಲಾಗಿತ್ತು. ಈ ಬೃಹತ್ ಸಮಾವೇಶದಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ತಜ್ಞರು ಭಾಗವಹಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ತಜ್ಞರಿಗೆ ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳೂ ವಿಶಿಷ್ಟವಾಗಿರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಲವು ಮಂದಿ ಪ್ರತಿನಿಧಿಗಳು ಬಫೆಟ್ ಸುತ್ತ ಪ್ಲೇಟ್ ಹಿಡಿದು ನಿಂತಾಗ ಅವರಿಗೆ ಅಚ್ಚರಿ- ಆಘಾತ ಕಾದಿತ್ತು. ಎಲ್ಲವೂ ಸಸ್ಯಾಹಾರಿ ಖಾದ್ಯಗಳು. ಅದರಲ್ಲೂ ಮುಖ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ಬಳಸದ ಸಸ್ಯಾಹಾರ. ನವರಾತ್ರಿ ವಾರವಾಗಿರುವುದರಿಂದ ಈ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅದು ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿಯವರ ಯೋಚನೆ ಎನ್ನುವುದು ಅರಿವಿಗೆ ಬಂತು. ಎಲ್ಲ ಅತಿಥಿಗಳಿಗೆ ವ್ರತಾಚರಣೆಯ ಆಹಾರವನ್ನು ಹೇಗೆ ಬಡಿಸುವಂತೆ ನೋಡಿಕೊಳ್ಳಲಾಯಿತು ಎಂದು ಉಮಾ ಖುಷಿಪಟ್ಟರು ಎನ್ನಲಾಗಿದೆ. ಆದರೆ ಎಲ್ಲ ಪ್ರತಿನಿಧಿಗಳು ಇದರಿಂದ ತೃಪ್ತರಾಗಲಿಲ್ಲ. ಆದ್ದರಿಂದ ಕೆಲವರು ಊಟಕ್ಕೇ ಚಕ್ಕರ್ ಹಾಕಿ ಹೋಟೆಲ್‌ನಲ್ಲಿ ತಮಗೆ ಬೇಕಾದ ಖಾದ್ಯಗಳನ್ನು ಸವಿದರು.

Writer - ಪತ್ರಕರ್ತ

contributor

Editor - ಪತ್ರಕರ್ತ

contributor

Similar News

ನಾಸ್ತಿಕ ಮದ