ಶರದ್ ಸನ್ಯಾಸ: ಪವರ್ ಯಾರಿಗೆ?

Update: 2016-04-30 18:23 GMT

ಪ್ರಭಾವಿ ಮರಾಠಿ ರಾಜಕಾರಣಿ ಶರದ್ ಪವಾರ್ ಅಸ್ವಸ್ಥತೆಯ ಕಾರಣದಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಹುದ್ದೆಯಿಂದ ವಿರಮಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅವರನ್ನು ತೀರಾ ಹತ್ತಿರದಿಂದ ಬಲ್ಲವರು ಹೇಳುವಂತೆ ಅವರು ವಿಶಿಷ್ಟ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಉತ್ತರಾಧಿಕಾರಿ ಯಾರು ಆಗಬೇಕು ಎಂಬ ಬಗ್ಗೆ ಇನ್ನೂ ದೃಢ ನಿರ್ಧಾರಕ್ಕೆ ಬರಲಾಗದೇ, ಪದೇ ಪದೇ ತಮ್ಮ ನಿಲುವು ಬದಲಾಯಿಸುತ್ತಿದ್ದಾರೆ. ಅವರ ಮೊದಲ ನಿರ್ಧಾರದಂತೆ ಪುತ್ರಿ ಸುಪ್ರಿಯಾ ಸುಳೆಯವರಿಗೆ ಈ ಹೊಣೆ ವಹಿಸಿದರೆ, ಅದನ್ನು ಜನ ಒಪ್ಪಿಕೊಳ್ಳುವುದು ಕಷ್ಟ. ಇದಕ್ಕೆ ಮುಖ್ಯ ಕಾರಣ ಎಂದರೆ, ಪ್ರಬಲ ಮರಾಠಿ ಸಮುದಾಯ ಒಬ್ಬ ಮಹಿಳೆಯನ್ನು ನಾಯಕಿಯಾಗಿ ಸ್ವೀಕರಿಸುವ ಮನೋಸ್ಥಿತಿಯನ್ನು ಹೊಂದಿಲ್ಲ. ಜತೆಗೆ ರಾಜಕೀಯ ಹಾಗೂ ಬೌದ್ಧಿಕವಾಗಿಯೂ ಅವರು ಆ ಮಟ್ಟದ ಮಹಿಳೆಯಲ್ಲ ಎಂಬ ಆರೋಪವೂ ಇದೆ.

ಪವಾರ್ ಅವರ ಮತ್ತೊಂದು ಟ್ರಂಪ್ ಕಾರ್ಡ್ ಎಂದರೆ ಅಳಿಯ ಅಜಿತ್. ಅವರನ್ನು ಕೂಡ ಮಹಾರಾಷ್ಟ್ರದ ಪ್ರಬಲ ರಾಜಕಾರಣ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ತಮ್ಮ ಬಾಸ್ ಹೊರಗಿದ್ದಾಗ, ಪಕ್ಷದ ಕೆಲ ಮುಖಂಡರು ಗುಂಪು ಸೇರಿ, ಶರದ್ ಸನ್ಯಾಸದ ಬಳಿಕ ತಮ್ಮ ರಾಜಕೀಯ ವೃತ್ತಿಬದುಕನ್ನು ಮುಂದುವರಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಆದ್ದರಿಂದ ಪವರ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು ಯಾರು? ಕೇಂದ್ರದ ಮಾಜಿ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಪುಲ್ ಪಟೇಲ್? ಆದರೆ ಈ ಸುಳಿವನ್ನು ಶರದ್ ಇನ್ನೂ ಎದೆಯಲ್ಲೇ ಬಚ್ಚಿಟ್ಟುಕೊಂಡಿದ್ದಾರೆ.

ಬಂಗಾಳ ಚುನಾವಣೆಯ ನಾರದ!
ಅವರ ಆಪ್ತ ವಲಯದಿಂದ ಹೊರಗಿರುವವರು ಅಥವಾ ಪತ್ರಕರ್ತರು ಕೂಡಾ ಮ್ಯಾಥ್ಯೂ ಸ್ಯಾಮ್ಯುವೆಲ್ ಹೆಸರನ್ನು ಕೇಳಿರಲಾರರು. ಹಾಗೆಯೇ ತೆರೆಮರೆಯಲ್ಲೇ ಇರುವುದನ್ನು ಅವರು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ಬಹಿರಂಗವಾದ ಅವರ ನಾರದ ಟೇಪ್ ಮಾತ್ರ ಮಮತಾ ಬ್ಯಾನರ್ಜಿ ಸರಕಾರವನ್ನು ಮತ್ತು ರಾಜ್ಯ ಚುನಾವಣೆಯನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ. ಈ ಟೇಪ್ ಬಿಡುಗಡೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಕೈವಾಡ ಇದೆ ಎಂಬ ವದಂತಿ ಕೂಡಾ ದಟ್ಟವಾಗಿ ಹಬ್ಬಿದೆ. ರಾಜ್ಯ ಚುನಾವಣೆ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ಇದನ್ನು ಬಿಡುಗಡೆ ಮಾಡಬೇಕಾದರೆ, ಕಾಣದ ಕೈ ಇದರ ಹಿಂದೆ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂಬ ವದಂತಿ ಕೇಳಿ ಬರುತ್ತಿದೆ. ಟಿಎಂಸಿ ನಾಯಕರು ಹಣ ತೆಗೆದುಕೊಳ್ಳುವ ದೃಶ್ಯಾವಳಿಯನ್ನು ಇದರಲ್ಲಿ ಸೆರೆ ಹಿಡಿಯಲಾಗಿದೆ. ಈ ಟೇಪ್‌ಗಳು ಬಂಗಾಳದಲ್ಲಿ ದೊಡ್ಡ ಚುನಾವಣಾ ವಿಷಯ. ಆದರೆ ಇದರ ಹಿಂದೆ ಇರುವವರು ಯಾರು ಎನ್ನುವುದು ಟಿಎಂಸಿ ನಾಯಕರನ್ನು ಕಾಡುತ್ತಿರುವ ಪ್ರಶ್ನೆ.

ಮುಚ್ಚದ ಬಾಗಿಲು
ರಾಂವಿಲಾಸ್ ಪಾಸ್ವಾನ್ ದೇಶದ ರಾಜಕಾರಣದ ರಾಜಕೀಯ ವಾತಾವರಣ ತಜ್ಞ ಎಂದೇ ಖ್ಯಾತರು. ಈಗಿನ ವಾತಾವರಣವನ್ನು ಅವರು ಗ್ರಹಿಸಬಲ್ಲರೇ? ಬಹುಶಃ ಹೌದು. ಅವರ ಆಪ್ತ ವಲಯದ ಪ್ರಕಾರ, ಮೋದಿ ತಮ್ಮನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಭಾವನೆ ಪಾಸ್ವಾನ್ ಅವರಲ್ಲಿದೆ. ಬಿಹಾರ ಚುನಾವಣೆಯ ಹೀನಾಯ ಸೋಲಿನ ಬಳಿಕ ಇವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆ ದಟ್ಟವಾಗಿದೆ. ಇತ್ತೀಚೆಗೆ ಸಂವಾದವೊಂದರಲ್ಲಿ, ನಾನು ಕಾಂಗ್ರೆಸ್ ಹಾಗೂ ತೃತೀಯ ರಂಗ ಸರಕಾರದ ಆಡಳಿತಾವಧಿಯಲ್ಲಿ ಕೂಡಾ ಕೇಂದ್ರ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಸೂಚ್ಯವಾಗಿ ಹೇಳಿದ್ದರು. ತಮ್ಮ ಎದುರಾಳಿಗಳ ಬಗೆಗಿನ ನಿಕಟ ಸಂಬಂಧದ ಮೆಲುಕು ಹಾಕಿದ್ದಾರೆ. ಆದ್ದರಿಂದ ಅವರಿಗೆ ಬಾಗಿಲು ಮುಚ್ಚಿದೆ ಎಂಬ ಭಾವನೆ ಹೊಂದಿರುವವರು, ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ.

ಹಾಟ್ ಸೀಟ್
ಉತ್ತರಾಖಂಡ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಉತ್ತರಾಖಂಡ ಹೈಕೋರ್ಟ್ ಸಂವಿಧಾನ ಬಿಕ್ಕಟ್ಟಿನ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಉತ್ತರಾಖಂಡ ರಾಜ್ಯಪಾಲ ಕೃಷ್ಣಕಾಂತ್ ಪಾಲ್ ಅವರ ಗಾದಿಯನ್ನು ನಡುಗಿಸುವಲ್ಲಂತೂ ಯಶಸ್ವಿಯಾಗಿದೆ. ಖಾಸಗಿಯಾಗಿ ಬಿಜೆಪಿಯ ಕೆಲ ಮುಖಂಡರು ಹಾಗೂ ಕೇಂದ್ರ ಸಚಿವರು ಕೂಡಾ, ರಾಜ್ಯಪಾಲರು ಅಷ್ಟೊಂದು ಆತುರದ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಅವರು ಸದನ ಪರೀಕ್ಷೆಗೆ ಸೂಚಿಸಿದರು. ಬಳಿಕ ಸರಕಾರವನ್ನು ವಜಾಗೊಳಿಸಿದರು. ಹಾಗೂ ಕೇಂದ್ರ ಸರಕಾರ ಅವರ ಶಿಫಾರಸಿನ ಅನ್ವಯ ಕ್ರಮಕ್ಕೆ ಮುಂದಾಯಿತು. ಇದೀಗ ಹೈಕೋರ್ಟ್ ಮುನಿಸಲು ಹಾಗೂ ವ್ಯತಿರಿಕ್ತ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಪಾಲರ ಕ್ರಮದ ಬಗ್ಗೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರಲ್ಲಿ ಕೂಡಾ ಯುಪಿಎ ನೇಮಕ ಮಾಡಿದ ರಾಜ್ಯಪಾಲರ ಬಗ್ಗೆ ಗೊಂದಲ ಮೂಡಿದೆ. ಇದು ಹೇಗೆ ಮುಂದೆ ರೂಪು ಪಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಮಂಡಳಿ ಸುಳಿವು
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಹೊಸದಾಗಿ ಪ್ರತಿಷ್ಠಾಪನೆಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ತಮಗೆ ರಾಜ ಕೀಯ ಪುನರ್ವಸತಿ ಕಲ್ಪಿಸಿದ ಗೌರವವನ್ನು ಆಪ್ತೆ ಹಾಗೂ ನಿಕಟವರ್ತಿ ಶೋಭಾ ಕರಂದ್ಲಾಜೆಗೆ ಸಮರ್ಪಿಸಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಜತೆಗಿನ ಭೇಟಿಯಲ್ಲಿ ಕೂಡಾ ಯುಡಿಯೂರಪ್ಪ ತಮ್ಮ ಹಕ್ಕುಪ್ರತಿಪಾದನೆಯನ್ನು ಮೋದಿ ಮುಂದೆ ಮಾಡುವಲ್ಲಿ ಸಫಲರಾಗಲಿಲ್ಲ ಎಂದು ಹೇಳಲಾಗಿದೆ. ಈ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಾಜಕೀಯ ಅಸಡ್ಡೆಗೆ ಗುರಿಯಾಗಿ ದ್ದರು. ಆದರೆ ರಾಜ್ಯ ಬಿಜೆಪಿ ಮುಖಂಡರು ಇತ್ತೀಚೆಗೆ ಮೋದಿಯವರನ್ನು ಭೇಟಿ ಮಾಡಿದ್ದು, ಇಡೀ ಚಿತ್ರಣ ನಾಟಕೀಯವಾಗಿ ಬದಲಾಗಲು ಕಾರಣವಾಯಿತು. ಒಬ್ಬ ವ್ಯಕ್ತಿಗೆ ತಕ್ಷಣವಾಗಲಿ, ಅಥವಾ ತಡವಾಗಿಯಾದರೂ ನ್ಯಾಯ ಒದಗಿಸಿಯೇ ಸಿದ್ಧ ಎಂದು ಮೋದಿ ಈ ಸಭೆಯಲ್ಲಿ ಹೇಳಿದ್ದರು ಎಂದು ತಿಳಿದುಬಂದಿದೆ. ತಕ್ಷಣ ಆ ಹೇಳಿಕೆಯನ್ನು ಚಕ್ಕನೆ ಹಿಡಿದುಕೊಂಡು, ಪಕ್ಷ ಈಗಲಾದರೂ ವಾಸ್ತವ ಅರ್ಥ ಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಪಾದಿಸಿದರು. ಪಕ್ಷ ವಿಭಜನೆಯಾಗುವುದನ್ನು ತಡೆಯಲು ಅವರಿಗೆ ಶೀಘ್ರ ನ್ಯಾಯ ಒದಗಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು. ಯಡಿಯೂರಪ್ಪ ಅವರಿಗೆ ಭಡ್ತಿ ಸಿಕ್ಕಿದ್ದು ನೋಡಿದರೆ ಮೋದಿಗೆ ಸ್ಪಷ್ಟ ಹಾಗೂ ಪ್ರಬಲ ಸಂದೇಶ ಸಿಕ್ಕಿದೆ ಎನ್ನುವುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News